ವಾಸ್ತು ತಜ್ಞ ಬಸವರಾಜ ಶೆಟ್ಟಿಗಾರರಿಗೆ “ಕ್ಷೇತ್ರ ಮಹಾತ್ಮೆಗಳ ಕೃತಿ ಬ್ರಹ್ಮ” ಬಿರುದು ಅರ್ಪಣೆ
Views: 180
ಕನ್ನಡ ಕರಾವಳಿ ಸುದ್ದಿ: 48 ಕ್ಷೇತ್ರಗಳ ಅಧ್ಯಯನ ಮಾಡಿ, 48 ಕ್ಷೇತ್ರ ಮಹಾತ್ಮೆ ಪ್ರಸಂಗಗಳನ್ನು ರಚಿಸಿ ಯಕ್ಷರಂಗಕ್ಕೆ ನೀಡಿ ಜಾಗತಿಕ ದಾಖಲೆ ನಿರ್ಮಿಸಿದ ವಾಸ್ತು ತಜ್ಞ ಬಸವರಾಜ್ ಶೆಟ್ಟಿಗಾರ್ ಅವರಿಗೆ ಇತ್ತೀಚಿಗೆ ಕಳುವಾಡಿ ಶ್ರೀ ಮಾರಿಕಾಂಬ ಕ್ಷೇತ್ರ ಮಹಾತ್ಮೆ ಪ್ರಸಂಗ ಬಿಡುಗಡೆ ಸಂದರ್ಭದಲ್ಲಿ ಕ್ಷೇತ್ರ ಮಹಾತ್ಮೆಗಳ ಕೃತಿ ಬ್ರಹ್ಮ ಬಿರುದು ನೀಡಿ ಅದ್ದೂರಿಯಾಗಿ 600 ನೇ ಸನ್ಮಾನ ನೀಡಿ ಗೌರವಿಸಲಾಯಿತು.
ಬೈಂದೂರು ಕಳುವಾಡಿಯ ಶ್ರೀ ಮಾರಿಕಾಂಬ ದೇವಸ್ಥಾನದ ವಠಾರದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಹೈದರಾಬಾದ್ ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರು ಶೆಟ್ಟಿಗಾರರ 68ನೇ ವಿನೂತನ ಪ್ರಸಂಗ ಲೋಕಾರ್ಪಣೆ ಮಾಡಿ ಮಾತನಾಡುತ್ತಾ, ಯಕ್ಷಗಾನ ರಂಗದಲ್ಲಿ ಏಳೆಂಟು ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಬರೆದವರನ್ನು ನೋಡಬಹುದು ಆದರೆ ಸತತ 48 ಕ್ಷೇತ್ರ ಮಹಾತ್ಮೆ ಪ್ರಸಂಗ ರಚಿಸಿ, ಶೆಟ್ಟಿಗಾರರು ವಿಶ್ವ ದಾಖಲೆ ನಿರ್ಮಿಸಿರುವುದಕ್ಕೆ ಸ್ವತಹ ಜ್ಯೋತಿಷಿಯಾದ ಕಾರಣ ಕ್ಷೇತ್ರದ ಕೂಲಂಕುಶ ವಿಚಾರವನ್ನು ಪ್ರಶ್ನಾವಳಿ ಮುಖೇನ ಗುರುತಿಸಿ ಯಶಸ್ವಿ ಯಕ್ಷಗಾನ ಪ್ರಸಂಗವನ್ನು ರಂಗಕ್ಕೆ ನೀಡಿರುತ್ತಾರೆ ಎಂದು ಶುಭ ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ಬೈಂದೂರು ಶಾಸಕರಾದ ಗುರುರಾಜ್ ಗಂಟಿ ಹೊಳೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ದೇವಸ್ಥಾನದ ವೀರಭದ್ರನಿಗೆ, ರಜತ ಮುಖವಾಡವನ್ನು ಅರ್ಪಿಸಲಾಯಿತು. ಸಮಾರಂಭವನ್ನು ಉದ್ಯಮಿ ಯುಬಿ ಶಟ್ಟಿ ಉದ್ಘಾಟಿಸಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಾಬು ಶೆಟ್ಟಿ ತೆಗ್ಗರ್ಸೆ, ಕೇಂಜ ಶ್ರೀಧರ್ ತಂತ್ರಿ, ಸಾಲಿಗ್ರಾಮ ಮೇಳದ ಯಜಮಾನರಾದ ಕಿಶನ್ ಕುಮಾರ್ ಶೆಟ್ಟಿ, ಪತ್ರಕರ್ತ ಅರುಣ್ ಕುಮಾರ್ ಶಿರೂರು. ಕಳುವಾಡಿ ಮೇಳದ ಸಂಚಾಲಕರಾದ ಗುಂಡು ಕಾಂಚನ್, ಬಗ್ವಾಡಿ ಮಹಿಷಾಸುರ ಮರ್ದಿನಿ ದೇವಸ್ಥಾನದ ಉದಯ್ ಕುಮಾರ್ ಹಟ್ಟಿಯಂಗಡಿ, ಕಳುವಾಡಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಅಭಿಜಿತ್ ತೆಗ್ದೆ, ವಸಂತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ನ್ಯಾಯವಾದಿ ಟಿಬಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸುಬ್ರಹ್ಮಣ್ಯ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು. ಸಂಜೀವ್ ಆಚಾರ್ಯ ವಂದಿಸಿದರು. ನಂತರ ಕಳುವಾಡಿ ಮೇಳದ ಕಲಾವಿದರಿಂದ “ಕಳುವಾಡಿ ಶ್ರೀ ಮಾರಿಕಾಂಬ ಕ್ಷೇತ್ರ ಮಹಾತ್ಮೆ” ಪ್ರಸಂಗ ಅದ್ದೂರಿಯಾಗಿ ಪ್ರದರ್ಶನ ನಡೆಯಿತು.