ತಾಳಮದ್ದಳೆ ಕಲಾವಿದರ ಅವಹೇಳನ: ಕ್ಷಮೆಯಾಚನೆಗೆ ಆಗ್ರಹ
Views: 85
ಕನ್ನಡ ಕರಾವಳಿ ಸುದ್ದಿ: ನಾಡಿನ ಶ್ರೇಷ್ಠ ಕಲೆಯಾಗಿರುವ ತಾಳ ಮದ್ದಳೆ ಹಾಗೂ ಅರ್ಥಧಾರಿಗಳ ಬಗ್ಗೆ ಅವಹೇಳನಕಾರಿ ಬರಹಗಳನ್ನು ಪ್ರಕಟಿಸಿರುವ ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ತಾಳ ಮದ್ದಳೆ ಕಲಾವಿದರು ಆಗ್ರಹಿಸಿದ್ದಾರೆ.
ಉಡುಪಿಯ ಯಕ್ಷಗಾನ ಕಲಾರಂಗದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತಾಳಮದ್ದಳೆ ಕಲಾವಿದರು, ವಿಶ್ವೇಶ್ವರ ಭಟ್ ಅವರು ತಮ್ಮ ಪತ್ರಿಕೆಯ ‘ಭಟ್ಟರ್ ಸ್ಕಾಚ್’ ಪ್ರಶೋತ್ತರ ಅಂಕಣದಲ್ಲಿ ಯಕ್ಷಗಾನ ವಿದ್ವಾಂಸ, ಖ್ಯಾತ ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿ ವಿರುದ್ದ ತಾಳಮದ್ದಳೆ ಅರ್ಥಧಾರಿಗಳ ಕುರಿತು ನಿರಂತರವಾಗಿ ಅಸಂಬದ್ಧ, ಅವಮಾನಕಾರಿ ಬರಹಗಳನ್ನು ಬರೆಯುತ್ತಿದ್ದಾರೆ ಎಂದವರು ಅಸಮಾಧಾನ ಹೊರ ಹಾಕಿದರು. ನಾವು ಅರ್ಥಧಾರಿಗಳೆಂಬ ಕಾರಣಕ್ಕೆ ನಮ್ಮ ಬಗ್ಗೆ ಏನು ಹೇಳಿದರೂ ಅದು ವಿಮರ್ಶೆ ಎಂಬ ಹೆಸರಿನಲ್ಲಿ ಸಹಿಸಲೇಬೇಕು ಎಂಬ ತಾತ್ಸಾರ ಧೋರಣೆ ಸಮಾಜದಲ್ಲಿ ಮೂಡಬಾರದು. ಪತ್ರಕರ್ತರಾದ ವಿಶ್ವೇಶ್ವರ ಭಟ್ಟರು ಪತ್ರಿಕಾ ಧರ್ಮವನ್ನು ಮೀರಿದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಡಾ.ಎಂ.ಪ್ರಭಾಕರ ಜೋಶಿ ಮಾತನಾಡಿ, ಕಲೆ ಮತ್ತು ಕಲಾವಿದರ ಕುರಿತಾದ ಸಭ್ಯ ವಿಮರ್ಶೆಗೆ ನಾವು ಸದಾ ತೆರೆದ ಮನಸ್ಸಿನಿಂದ ಸಿದ್ದರಿದ್ದೇವೆ. ಆದರೆ, ವಿಮರ್ಶೆಯ ಹೆಸರಿನಲ್ಲಿ ಕಲಾವಿದರ ತೇಜೋವಧೆ ಮಾಡುವುದು ತಾಳಮದ್ದಳೆಯಂತಹ ಶ್ರೇಷ್ಠ ಕಲೆಯನ್ನು ಅರಿಯದೇ ಅವಹೇಳನ ಮಾಡುವುದು ನೋವಿನ ಸಂಗತಿ ಎಂದರು.
ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಸರ್ಪಂಗಳ ಈಶ್ವರ ಭಟ್, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ವಿದ್ವಾನ್ ಉಮಾಕಾಂತ ಭಟ್, ಹಿರಣ್ಯ ವೆಂಕಟೇಶ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಅಶೋಕ್ ಭಟ್ ಉಜಿರೆ, ರಾಧಾಕೃಷ್ಣ ಕಲ್ಟಾರ್, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಹರೀಶ್ ಬಳಂತಿಮುಗರು, ವಾಸುದೇವ ರಂಗಾ ಭಟ್, ಡಾ.ಪ್ರದೀಪ್ ಸಾಮಗ, ಪವನ್ ಕಿರಣೆರೆ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಕಲಾರಂಗದ ಗಂಗಾಧರ ರಾವ್, ಮುರಳಿ ಕಡೆಕಾರ್, ನಾರಾಯಣ ಹೆಗ್ಡೆ ಇದ್ದರು.






