ಸಾಂಸ್ಕೃತಿಕ

ಕಲೆಯನ್ನು ಗುರುತಿಸಿ, ನಮ್ಮ ದೇಹವನ್ನಲ್ಲ.. ಪಾಪರಾಜಿಗಳ ವರ್ತನೆಗೆ ಗುಡುಗಿದ ಕಾಂತಾರದ ಬೆಡಗಿ

Views: 42

ಕನ್ನಡ ಕರಾವಳಿ ಸುದ್ದಿ: ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಟಿಯರು ಕಾಣಿಸಿಕೊಂಡಾಗ ಕ್ಯಾಮೆರಾಗಳನ್ನು ಅನಗತ್ಯವಾಗಿ ಜೂಮ್ ಮಾಡಿ, ಅವರ ದೇಹವನ್ನು ಅಸಭ್ಯವಾಗಿ ಚಿತ್ರೀಕರಿಸುವ ‘ಪಾಪರಾಜಿ’  ಸಂಸ್ಕೃತಿಯ ವಿರುದ್ಧ ಸ್ಯಾಂಡಲ್‌ವುಡ್‌ನಲ್ಲಿ ಇದೀಗ ದೊಡ್ಡ ಮಟ್ಟದ ಆಕ್ರೋಶ ಭುಗಿಲೆದ್ದಿದೆ. ಈ ಅಸಹ್ಯಕರ ಟ್ರೆಂಡ್ ವಿರುದ್ಧ ‘ಕಾಂತಾರ’ ಬೆಡಗಿ, ನಟಿ ಸಪ್ತಮಿ ಗೌಡ ನೇರವಾಗಿ ಸಿಡಿದೆದ್ದಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಮರ ಸಾರಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಹಾಗೂ ಡಿಜಿಟಲ್ ಮೀಡಿಯಾ ಹೆಸರಿನಲ್ಲಿ ಪಾಪರಾಜಿಗಳ ಹಾವಳಿ ಮಿತಿಮೀರುತ್ತಿದೆ. ನಟಿಯರು, ಕಲಾವಿದೆಯರು ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋದಾಗ ಅವರ ಫೋಟೋ ಅಥವಾ ವಿಡಿಯೋಗಳನ್ನು ಸೆರೆಹಿಡಿಯುವ ನೆಪದಲ್ಲಿ ದೇಹದ ಭಾಗಗಳನ್ನು ಕೆಟ್ಟದಾಗಿ ಫೋಕಸ್ ಮಾಡುವ ಚಾಳಿ ಹೆಚ್ಚಾಗುತ್ತಿದೆ. ಲೈಕ್ಸ್ ಹಾಗೂ ವೀವ್ಸ್‌ಗಾಗಿ ನಟಿಯರನ್ನು ಅಸಭ್ಯವಾಗಿ ಬಿಂಬಿಸುತ್ತಿರುವ ಇಂತಹ ವಿಕೃತ ಮನಸ್ಥಿತಿಯ ವಿರುದ್ಧ ಸಪ್ತಮಿ ಗೌಡ ತೀವ್ರ ಬೇಸರ ಹೊರಹಾಕಿದ್ದಾರೆ.
ಈ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ನಟಿ ಸಪ್ತಮಿ ಗೌಡ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಟಿಯರ ಫೋಟೋ ಮತ್ತು ವಿಡಿಯೋ ಚಿತ್ರೀಕರಿಸುವಾಗ ಎಚ್ಚರಿಕೆ ಹಾಗೂ ಘನತೆ ಇರಲಿ. ಅನವಶ್ಯಕವಾಗಿ ಕ್ಯಾಮೆರಾಗಳನ್ನು ಜೂಮ್ ಮಾಡಿ ಶೂಟ್ ಮಾಡುವುದನ್ನು ದಯವಿಟ್ಟು ನಿಲ್ಲಿಸಿ. ನಾವು ಕಲಾವಿದರು, ದಯವಿಟ್ಟು ನಮ್ಮ ಕಲೆಯನ್ನು ಗುರುತಿಸಿ, ನಮ್ಮ ದೇಹವನ್ನಲ್ಲ ಎಂದು ಖಡಕ್ ಆಗಿ ವಿನಂತಿಸಿದ್ದಾರೆ.

ಅಸಭ್ಯ ವಿಡಿಯೋಗಳ ವಿರುದ್ಧ ನಟಿ ಸಪ್ತಮಿ ಗೌಡ ಆರಂಭಿಸಿರುವ ಈ ಹೋರಾಟಕ್ಕೆ ಇದೀಗ ಇಡೀ ಕನ್ನಡ ಚಿತ್ರರಂಗ ಬೆಂಬಲ ಸೂಚಿಸಿದೆ. ಮಹಿಳಾ ಕಲಾವಿದೆಯರ ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಲವು ನಟ-ನಟಿಯರು ಸಪ್ತಮಿ ಅವರ ಮಾತಿಗೆ ದನಿಗೂಡಿಸಿದ್ದಾರೆ.

ಒಟ್ಟಿನಲ್ಲಿ, ಬಾಲಿವುಡ್‌ಗೆ ಮಾತ್ರ ಸೀಮಿತವಾಗಿದ್ದ ಈ ‘ವಿಕೃತ ಪಾಪರಾಜಿ’ ಸಂಸ್ಕೃತಿ ಇದೀಗ ಸ್ಯಾಂಡಲ್‌ವುಡ್‌ಗೂ ಕಾಲಿಟ್ಟಿರುವುದು ಆತಂಕದ ವಿಚಾರ. ಸಪ್ತಮಿ ಗೌಡ ಅವರ ಈ ದಿಟ್ಟ ಹೆಜ್ಜೆಯಿಂದಾದರೂ ಇಂತಹ ಅಸಭ್ಯ ಕ್ಯಾಮೆರಾ ಕಣ್ಣುಗಳಿಗೆ ಬ್ರೇಕ್ ಬೀಳುತ್ತಾ ಎಂಬುದನ್ನು ಕಾದುನೋಡಬೇಕಿದೆ.

Related Articles

Back to top button
error: Content is protected !!