ಕನ್ನಡ ಚಿತ್ರರಂಗದಲ್ಲಿ ಮೊದಲ ಶ್ರೇಷ್ಠ ಪೋಷಕ ನಟಿ ರಾಷ್ಟ್ರಪ್ರಶಸ್ತಿ ಪಡೆದ ರೂಪಾಶ್ರೀ ವರ್ಕಾಡಿ
Views: 82
ಕನ್ನಡ ಕರಾವಳಿ ಸುದ್ದಿ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ, ಸುಮಂತ್ ಭಟ್ ನಿರ್ದೇಶನದ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಣದ ‘ಮಿಥ್ಯ’ 3 ಪ್ರಶಸ್ತಿ ಗೆದ್ದುಕೊಂಡಿದೆ. ಈ ಪೈಕಿ, ರೂಪಶ್ರೀ ವರ್ಕಾಡಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದು, ಕನ್ನಡ ಚಿತ್ರರಂಗದಲ್ಲಿ ಈ ಗೌರವ ಪಡೆದ ಮೊದಲ ನಟಿ ಎಂಬ ಇತಿಹಾಸ ನಿರ್ಮಿಸಿದ್ದಾರೆ.
ಶಿವಧ್ವಜ್ ಶೆಟ್ಟಿ ನಿರ್ದೇಶನದ ಇಂಬು’ ತುಳು ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಲಭಿಸಿದ್ದು, ಜೊತೆಗೆ ನಟ,ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಪರಂವಾ ಸ್ಟುಡಿಯೋಸ್ ನಿರ್ಮಾಣದ, ಸುಮಂತ್ ಭಟ್ ನಿರ್ದೇಶನದ ಮಿಥ್ಯ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ, ಅತ್ಯುತ್ತಮ ಬಾಲ ನಟ, ಜೊತೆಗೆ ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ ವಿಭಾಗದಲ್ಲಿ ಪ್ರಶಸ್ತಿ ಸಂದಿವೆ.

ರೂಪಶ್ರೀ ವರ್ಕಾಡಿ : ಮೂಲತಃ ರಂಗಭೂಮಿ ಹಿನ್ನಲೆಯುಳ್ಳ ರೂಪಶ್ರೀ ವರ್ಕಾಡಿ ರಕ್ಷಿತ್ ಶೆಟ್ಟಿ ನಿರ್ಮಾಣದ ಮಿಥ್ಯ ಚಿತ್ರದಲ್ಲಿನ ಅದ್ಭುತ ನಟನೆಗಾಗಿ ಲಭಿಸಿದ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರೂಪಶ್ರೀ ವರ್ಕಾಡಿ ಈ ಚಿತ್ರದ ಮೂಲಕ ರಾಷ್ಟ್ರ ಮಟ್ಟದ ಗಮನ ಸೆಳೆದಿದ್ದಾರೆ.
ಮಂಜೇಶ್ವರ ತಾಲೂಕು ವರ್ಕಾಡಿ ಗ್ರಾಮದ ಹರೀಶ್ ಶೆಟ್ಟಿಗಾರ್ ಮತ್ತು ದಿವಂಗತ ಹೇಮಾವತಿ ದಂಪತಿಯ ಪುತ್ರಿಯಾಗಿ ಜನಿಸಿದ ರೂಪಶ್ರೀ ವರ್ಕಾಡಿ ತಮ್ಮ ಶಿಕ್ಷಣವನ್ನು ಕೊಡ್ಲಮೊಗರು ಶ್ರೀ ವಾಣಿ ವಿಜಯ ಎ.ಯು. ಪಿ ಶಾಲೆ, ಸರಕಾರಿ ಪದವಿ ಪೂರ್ವ ಕಾಲೇಜು ಕನ್ಯಾನದಲ್ಲಿ ಪೂರ್ತಿ ಗೊಳಿಸಿದರು.
ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಅವರ ‘ಸಂಸಾರದ ಸರ್ಕಸ್’ ಎಂಬ ನಾಟಕದ ಮೂಲಕ ವೃತ್ತಿಪರ ನಾಟಕ ರಂಗಕ್ಕೆ ಪಾದಾರ್ಪಣೆ ಮಾಡಿದರು. ಸುಮಾರು 27 ವರ್ಷಗಳಿಂದ ತುಳು, ಕನ್ನಡ ಭಾಷೆಗಳ 700ಕ್ಕೂ ಅಧಿಕ ನಾಟಕಗಳಲ್ಲಿ ನಟಿಸಿದ್ದಾರೆ.4000 ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿ ಮನೆಮಾತಾಗಿದ್ದಾರೆ. ‘ಬಿರ್ಸೆ’ ಎಂಬ ತುಳು ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಇವರು ತುಳು, ಕನ್ನಡ, ಬ್ಯಾರಿ, ಅರೆ ಭಾಷೆಗಳಲ್ಲಿ 85ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ನಟಿಸಿದ ‘ಬ್ಯಾರಿ’, ‘ಜೀಟಿಗೆ’ ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ‘ಒಂದು ಮೊಟ್ಟೆಯ ಕತೆ’, ‘ಲುಂಗಿ’, ‘ಮಿಥ್ಯ’, ‘ಸಿಂಪಲ್ ಆಗಿ ಇನ್ನೊಂದು ಲವ್ ಸ್ಟೋರಿ’, ‘ಮಡಮಕ್ಕಿ’, ‘ಪುರುಷೋತ್ತಮನ ಪ್ರಸಂಗ’ ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದಾರೆ.
ಜೊತೆಗೆ ಕ್ರಿಸ್ಟಿಫೋರ್ ನೀನಸಂ ಮತ್ತು ಸುರೇಶ್ ಶೆಟ್ಟಿ ಎನ್. ಎಸ್. ಡಿ ದೆಹಲಿ, ಮತ್ತು ವಿದ್ದು ಉಚ್ಚಿಲ್ ರಂಗಾಯಣ ಇವರಿಂದ ತರಬೇತಿಯನ್ನು ಪಡೆದು, ನಾಟಕ ಮಾತ್ರವಲ್ಲದೆ ಸಿನೆಮಾ, ಆಲ್ಬಮ್ ಸಾಂಗ್, ಕಿರು ಚಿತ್ರಗಳು ಇತ್ಯಾದಿಗಳಲ್ಲಿ ತಮ್ಮ ಅಮೋಘ ನಟನಾ ಕೌಶಲ್ಯ ಮೆರೆದಿದ್ದಾರೆ.
ರೂಪಶ್ರೀ ವರ್ಕಾಡಿ ನಟಿಸಿದ ಮಾ ಎಂಬ ಕಿರು ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಒಲಿದು ಬಂದಿದ್ದು, 2017 ರಲ್ಲಿ ರೆಡ್ ಎಫ್ ಎಮ್ ನವರು ಸಾದರ ಪಡಿಸಿದ ಕಾರ್ಯಕ್ರಮದಲ್ಲಿ ಏಸ ಎಂಬ ತುಳು ಚಿತ್ರಕ್ಕೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ. 2023 ರ ಕೋಸ್ಟಲ್ ವುಡ್ ಫಿಲಂ ಅವಾರ್ಡ್ ನಲ್ಲಿ ರಡ್ಜ್ ಎಕರೆ ಎಂಬ ತುಳು ಸಿನಿಮಾಗೆ ಉತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ.
ಎರಡುವರೆ ದಶಕಗಳಿಂದ ಬಹು ಭಾಷ ನಾಟಕ, ಸಿನಿಮಾ ರಂಗದಲ್ಲಿ ಅಪ್ರತಿಮ ನಟನ ಕೌಶಲ್ಯದಿಂದ ಮಿಂಚುತಿದ್ದು, ಪ್ರಸ್ತುತ ವಿಜಯ್ ಕುಮಾರ್ ಕೊಡಿಯಾಲಬೈಲ್ ರವರ ತಂಡದಲ್ಲಿ ಕಲಾ ಸೇವೆಯನ್ನು ಮಾಡುತ್ತಿದ್ದಾರೆ.






