ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಮೂವರ ಬಂಧನ: ಸುಪಾರಿ ಕೊಟ್ಟವರು ಯಾರು? ಡೇವಿಡ್ ಪತ್ನಿ ಹೇಳಿದ್ದೇನು?
Views: 0
ಕನ್ನಡ ಕರಾವಳಿ ಸುದ್ದಿ:ಮುದರಂಗಡಿಯಲ್ಲಿ ಉದ್ಯಮಿ ಯೋರ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಉಡುಪಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಘಟನೆ ನಡೆದು ಕೆಲವೇ ಗಂಟೆಗಳೊಳಗೆ ಮೂವರು ಆರೋಪಿಗಳನ್ನು ಬೈಂದೂರು ಸಮೀಪ ಒತ್ತಿನೆಣೆಯಲ್ಲಿ ಬಂಧಿಸಿದ್ದಾರೆ.
ಉತ್ತರ ಪ್ರದೇಶದ ರಾಜು (42), ಉತ್ತರಾಖಂಡ ರಾಜ್ಯದ ಅಜಯ್ ರಸ್ತೆಗಿ ಯಾನೆ ಅನ್ನೋಲ್ (23) ಮತ್ತು ಬಿಹಾರ ರಾಜ್ಯದ ಜಿಯಾಹುಲ್ ವಜೂಲ್ ಶೇಖ್ ಅಲಿಯಾಸ್ ದೀಪಕ್ (38) ಪ್ರಕರಣದ ಆರೋಪಿಗಳು
ಯಾವ ವಿಚಾರಕ್ಕೆ ಹತ್ಯೆ?
ಪಡುಬಿದ್ರೆಯ ಸಂಸ್ಥೆಯೊಂದರಲ್ಲಿ ಗುತ್ತಿಗೆ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿ ಉತ್ತರ ಭಾರತದ ಉದ್ಯಮಿಯೊಬ್ಬರಿಗೆ ಟೆಂಡರ್ಆಗಿತ್ತು. ಡೇವಿಡ್ ಈ ಕಾಮಗಾರಿಯ ಉಪ ಗುತ್ತಿಗೆ ಪಡೆದಿದ್ದು, ಹೊರ ರಾಜ್ಯದ ಗುತ್ತಿಗೆದಾರ ಡೇವಿಡ್ ಅವರಿಗೆ ಸುಮಾರು 80 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಗುತ್ತಿಗೆಯ ಹಣ ಬಾಕಿ ಇಟ್ಟಿದ್ದ. ಡೇವಿಡ್ ಮಾತುಕತೆ ನಡೆಸಿದ್ದರೂ ಗುತ್ತಿಗೆದಾರ ಹಣ ನೀಡದೇ ಸತಾಯಿಸುತ್ತಿದ್ದ. ಇದರಿಂದ ಕೋಪಗೊಂಡ ಡೇವಿಡ್ 2ರಿಂದ 3 ಕೋಟಿ ರೂ. ಬೆಲೆಬಾಳುವ ಯಂತ್ರೋಪಕರಣಗಳು ಸೇರಿದಂತೆ ಆ ಗುತ್ತಿಗೆದಾರನಿಗೆ ಸಂಬಂಧಿಸಿದ ಕೆಲವು ವಸ್ತುಗಳನ್ನು ತನ್ನ ಸುಪರ್ದಿಯಲ್ಲಿಟ್ಟು ಹಣ ಕೊಟ್ಟರೆ ಯಂತ್ರೋಪಕರಣಗಳನ್ನು ನೀಡುವುದಾಗಿ ಹೇಳುತ್ತಿದ್ದದ್ದರಿಂದ ಇಬ್ಬರ ನಡುವಿನ ವೈಮನಸ್ಸಿಗೆ ಕಾರಣವಾಗಿತ್ತು. ಕೊನೆಗೆ ಈ ಪ್ರಕರಣ ಹತ್ಯೆಯಲ್ಲಿ ಅಂತ್ಯ ಕಂಡಿದೆ ಎನ್ನಲಾಗಿದೆ.
ಡೇವಿಡ್ ಹತ್ಯೆಗೆ 2-3 ತಿಂಗಳ ಹಿಂದೆಯೇ ಸುಪಾರಿ
ಡೇವಿಡ್ ಹತ್ಯೆಗೆ 2-3 ತಿಂಗಳ ಹಿಂದೆಯೇ ಸುಪಾರಿ ಕೊಟ್ಟಿದ್ದು, ಹಂತಕರು ಸ್ಕೆಚ್ ಹಾಕಿಕೊಂಡಿದ್ದರು. 2 ತಿಂಗಳ ಹಿಂದೆ ಉಡುಪಿಗೆ ಬಂದಿದ್ದ ಹಂತಕರು ಸ್ಥಳೀಯರ ಸಹಕಾರದೊಂದಿಗೆ ಡೇವಿಡ್ ಅವರ ಚಲನ-ವಲನಗಳನ್ನು ಗಮನಿಸಿದ್ದರು. ಗುಂಡಿಕ್ಕಿ ಕೊಲ್ಲುವ ಒಂದು ವಾರಗಳ ಮುನ್ನ ಜಿಲ್ಲೆಗೆ ಆಗಮಿಸಿ, ಪಡುಬಿದ್ರಿಯಲ್ಲಿ ಖಾಸಗಿ ಲಾಡ್ಜ್ನಲ್ಲಿ ತಂಗಿದ್ದರು ಎನ್ನಲಾಗಿದೆ. ಜತೆಗೆ ಮಾಹಿತಿ ಕಲೆ ಹಾಕಿ ಹತ್ಯೆ ಮಾಡುವ ದಿನವನ್ನೂ ನಿಗದಿ ಮಾಡಿಕೊಂಡಿದ್ದರು. ಈ ಹತ್ಯೆಗೆ ಸಂಬಂಧಿಸಿ ಹಂತಕ ರಾಜು ಎಂಬಾತನ ಬ್ಯಾಂಕ್ ಖಾತೆಗೆ ಹತ್ಯೆ ನಡೆದ ದಿನ ಸೇರಿದಂತೆ ಈವರೆಗೆ ಒಟ್ಟು 2 ಲಕ್ಷ ರೂ. ಹಣ ಜಮೆಯಾಗಿದ್ದು, ಇನ್ನಷ್ಟು ಹೆಚ್ಚಿನ ಮೊತ್ತಕ್ಕೆ ಈ ಡೀಲ್ ನೀಡಲಾಗಿದೆ ಎಂಬ ಮಾಹಿತಿ ದೊರಕಿದೆ.
ಆರೋಪಿಗಳಲ್ಲಿ 4-5 ಮೊಬೈಲ್ ನಂಬರ್ಗಳಿದ್ದು, ಸುಪಾರಿ ಪಡೆದು ಕೃತ್ಯ ಎಸಗಿ ರಾಜ್ಯದಿಂದ ಅನ್ಯ ರಾಜ್ಯಕ್ಕೆ ತಲೆಮರೆಸಿಕೊಂಡು ತಿರುಗಾಡಲು ಯೋಜನೆ ಹಾಕಿದ್ದರು. ಹಂತಕ ರಾಜು ಬಿಟ್ಟರೆ ಉಳಿದಿಬ್ಬರಿಗೆ ನಿಜವಾದ ಹೆಸರು, ಮೂಲ ದಾಖಲೆಗಳೇ ಇರಲಿಲ್ಲ ಎಂದು ಎಸ್ಪಿ ತಿಳಿಸಿದ್ದಾರೆ.
ಹತ್ಯೆಯಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗಲಿ: ಡೇವಿಡ್ ಪತ್ನಿ

ಘಟನೆಯ ಬಗ್ಗೆ ಮಾತನಾಡಿದ ಪ್ರಿಯಾ, ಡೇವಿಡ್ ತನ್ನ ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ಕುಟುಂಬದೊಂದಿಗೆ ಹಂಚಿಕೊಂಡಿಲ್ಲ ಎಂದು ಹೇಳಿದರು. ಅವರ ದೈನಂದಿನ ದಿನಚರಿಯ ಭಾಗವಾಗಿ, ಅವರು ಊಟ ಮಾಡಿ ಕಚೇರಿಗೆ ಹೊರಟರು. ಘಟನೆಯ ಬಗ್ಗೆ ನಮಗೆ ತಿಳಿದ ತಕ್ಷಣ, ನಾವು ಸ್ಥಳಕ್ಕೆ ಧಾವಿಸಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ ಎಂದು ಅವರು ಹೇಳಿದರು.
ತನ್ನ ಪತಿ ಕುಟುಂಬಕ್ಕೆ ಯಾವುದೇ ಕಷ್ಟವನ್ನುಂಟು ಮಾಡಿಲ್ಲ ಎಂದು ಅವರು ಹೇಳಿದರು. ನನ್ನ ಗಂಡನನ್ನು ಗುಂಡಿಕ್ಕಿ ಕೊಂದವರು ಮತ್ತು ಅವರ ರಕ್ತ ಹರಿಸಿದವರು ನ್ಯಾಯವನ್ನು ಎದುರಿಸಲೇಬೇಕು. ಪೊಲೀಸರು ತೆಗೆದುಕೊಂಡ ತ್ವರಿತ ಕ್ರಮದಿಂದ ನನಗೆ ಸಮಾಧಾನವಾಗಿದೆ. ಆರೋಪಿಗಳು ಮತ್ತು ಪಿತೂರಿಯಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಪ್ರಿಯಾ ಆಗ್ರಹಿಸಿದರು.






