ಕುಂದಾಪುರ: ಬೀಜಾಡಿ ಸೊಸೈಟಿಯಲ್ಲಿ 15 ಲಕ್ಷ ರೂ.ಸಾಲ ನೀಡುವ ಭರವಸೆ ನೀಡಿ 7 ಲಕ್ಷ ರೂ.ಪಡೆದು ವಂಚನೆ: ಯುವಕ ಆತ್ಮಹತ್ಯೆ, ಆರೋಪಿ ವಿರುದ್ಧ ಪ್ರಕರಣ ದಾಖಲು
Views: 102
ಕನ್ನಡ ಕರಾವಳಿ ಸುದ್ದಿ: 15 ಲಕ್ಷ ರೂಪಾಯಿ ಸಾಲ ನೀಡುವ ಭರವಸೆ ನೀಡಿ 7 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ ಪರಿಣಾಮ, ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ನ್ಯಾಯಾಲಯಕ್ಕೆ ಸಲ್ಲಿಸಲಾದ ಖಾಸಗಿ ದೂರಿನ ಆಧಾರದ ಮೇಲೆ ಬೀಜಾಡಿ ಗ್ರಾಮದ ಸತೀಶ ಕಾಂಚನ್ ಎಂಬಾತನ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದ ಮೀರಾ ಕೃಷ್ಣಮೂರ್ತಿ ಎಂಬುವರ ಮಗ ವಿನಯಕುಮಾರ್ ವಂಚನೆಗೊಳಗಾಗಿ ಪ್ರಾಣ ಕಳೆದುಕೊಂಡ ದುರ್ದೈವಿ.
ಆರೋಪಿ ಸತೀಶ ಕಾಂಚನ್, ಬೀಜಾಡಿಯಲ್ಲಿರುವ ತನ್ನ ‘ಏಕದಂತ ಸೌಹಾರ್ಧ ಸಹಕಾರಿ ಸಂಘ (ನಿ)’ ಸೊಸೈಟಿಯಲ್ಲಿ 5 ಲಕ್ಷ ರೂಪಾಯಿ ಠೇವಣಿ ಇಟ್ಟಲ್ಲಿ 15 ಲಕ್ಷ ರೂಪಾಯಿ ಸಾಲ ನೀಡುವುದಾಗಿ ವಿನಯಕುಮಾರ್‌ಗೆ ತಿಳಿಸಿದ್ದನು. ಇದನ್ನು ನಂಬಿದ ವಿನಯ್ ಕುಮಾರ್ ಅವರು 2023 ರ ಆಗಸ್ಟ್ 16 ರಂದು ಸಹಕಾರಿಯ ಸದಸ್ಯತ್ವ ಪಡೆದು 5 ಲಕ್ಷ ರೂಪಾಯಿ ಠೇವಣಿ ಇರಿಸಿ ರಶೀದಿ ಹಾಗೂ ಬಾಂಡ್ ಪಡೆದುಕೊಂಡಿದ್ದರು. ಇದಲ್ಲದೆ, ಇತರೆ ಖರ್ಚು-ವೆಚ್ಚಗಳ ನೆಪದಲ್ಲಿ ಆರೋಪಿಯು ಹೆಚ್ಚುವರಿಯಾಗಿ 2 ಲಕ್ಷ ರೂಪಾಯಿ ಹಣವನ್ನೂ ಪಡೆದಿದ್ದನು.
ಅದಾದ ಬಳಿಕ ಆರೋಪಿಯು ವಾಗ್ದಾನದಂತೆ 15 ಲಕ್ಷ ರೂ. ಸಾಲವನ್ನೂ ನೀಡದೆ, ಠೇವಣಿ ಇರಿಸಿದ್ದ 5 ಲಕ್ಷ ರೂ. ಹಾಗೂ ಹೆಚ್ಚುವರಿಯಾಗಿ ಪಡೆದ 2 ಲಕ್ಷ ರೂ. ಸೇರಿ ಒಟ್ಟು 7 ಲಕ್ಷ ರೂಪಾಯಿಗಳನ್ನು ಹಿಂತಿರುಗಿಸದೆ ವಂಚಿಸಿದ್ದನು. ಹಣ ಕಳೆದುಕೊಂಡು ದಿಕ್ಕು ಕಾಣದೆ ತೀವ್ರ ಮನನೊಂದ ವಿನಯ್ ಕುಮಾರ್, 2025 ರ ಫೆಬ್ರವರಿ 13 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಮಗನ ಆತ್ಮಹತ್ಯೆಯ ನಂತರ ತಾಯಿ ಮೀರಾ ಕೃಷ್ಣಮೂರ್ತಿ ಅವರು ಆರೋಪಿಗೆ ದೂರವಾಣಿ ಕರೆ ಮಾಡಿ ಹಣ ಹಿಂತಿರುಗಿಸುವಂತೆ ಕೇಳಿದಾಗ, ಆತ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಕುರಿತು ಮೃತನ ತಾಯಿ ಮಾನ್ಯ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 82/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 108 (ಆತ್ಮಹತ್ಯೆಗೆ ಪ್ರಚೋದನೆ), 318(2) (ವಂಚನೆ), 351 ಹಾಗೂ 352 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.






