ರಾಜಕೀಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆಗೆ ಮುಂದಾದರೆ ಹೋರಾಟದ ಎಚ್ಚರಿಕೆ ನೀಡಿದ ಅಹಿಂದ ನಾಯಕರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಲು ಮುಂದಾದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅಹಿಂದ ಚಳವಳಿ ನಾಯಕರು ಎಚ್ಚರಿಸಿದ್ದಾರೆ.

Views: 59

ಬೆಂಗಳೂರು: ಜನಪರ ಆಡಳಿತ, ಭ್ರಷ್ಟಚಾರರಹಿತ ಆಡಳಿತ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಲು ಮುಂದಾದರೆ ರಾಜ್ಯಾದ್ಯಂತ ಹೋರಾಟ ಮಾಡಲಿದ್ದೇವೆ ಎಂದು ಅಹಿಂದ ಚಳವಳಿ ರಾಜ್ಯ ಜಂಟಿ ಮುಖ್ಯ ಸಂಚಾಲಕ ಎನ್.ವೆಂಕಟೇಶ್ ಗೌಡ ಹೇಳಿದರು.

ಬೆಂಗಳೂರು ಪ್ರಸ್ ಕ್ಲಬ್ ಸಭಾಂಗಣದಲ್ಲಿ ಬುಧವಾರ ಅಹಿಂದ ಚಳವಳಿ ಸಂಘಟನೆ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಮಾಧ್ಯಮಗೋಷ್ಠಿ ನೆಡೆಸಿ ಮಾತನಾಡಿದ ಅವರು, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಿದ್ದಾಂತವನ್ನು ಪಾಲಿಸುತ್ತಾ ಎಲ್ಲ ವರ್ಗ, ಧರ್ಮದವರಿಗೆ ಸರಿಸಮಾನವಾಗಿ ನೋಡಿಕೊಳ್ಳುತ್ತಿರುವ ಧೀಮಂತ ನಾಯಕ ಸಿದ್ದರಾಮಯ್ಯ ನಾಡಿನ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

ಸಮಾಜವಾದ ಚಳವಳಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಆಶಯಗಳನ್ನು ಸಕಾರಗೊಳಿಸುತ್ತಿರುವ ನಾಯಕ ಸಿದ್ದರಾಮಯ್ಯ ಆಗಿದ್ದಾರೆ. ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿನ ಆಡಳಿತದಲ್ಲಿ ಸಿದ್ದರಾಮಯ್ಯ ಅವರು 165 ಭರವಸೆ ಕೊಟ್ಟಿದ್ದರು, ಈಗ ಆಡಳಿತಕ್ಕೆ ಬಂದ ನಂತರ ಎಲ್ಲ ಭರವಸೆ ಈಡೇರಿಸಿದ ದೇಶ ಮೊಟ್ಟ ಮೊದಲ ಮುಖ್ಯಮಂತ್ರಿ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ ಎಂದರು.

ಎರಡನೆಯ ಬಾರಿಗೆ ಮುಖ್ಯಮಂತ್ರಿಯಾಗಿ ಐದು ಗ್ಯಾರಂಟಿ ಯೋಜನೆಗಳನ್ನು ನಾಡಿನ ಪ್ರತಿ ಕುಟುಂಬಕ್ಕೆ ತಲುಪಿಸಿ ಪಾರದರ್ಶಕ ಆಡಳಿತ ನೀಡಿದ್ದಾರೆ. ಇತ್ತೀಚಿನ ಕೆಲವು ವಿದ್ಯಮಾನಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಬೇಕು ಎಂದು ಅಪಸ್ವರ ಬರುತ್ತಿದೆ ಅಷ್ಟೇ. ಹಾಗೇನಾದರೂ ಬದಲಾವಣೆ ಮಾಡಲು ಮುಂದಾದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅಹಿಂದ ಚಳುವಳಿ ಸಂಘಟನೆಯ ಮೂರ್ತಿ ಸಿದ್ದಯ್ಯ, ಪ್ರಜ್ವಲ್ ಸ್ವಾಮಿ, ರಿಯಾಜ್ ಮೊಹಮ್ಮದ್, ಅಶೋಕ್ ಕುಮಾರ್, ಯೋಗೇಶ್ವರಿ ವಿಜಯ್, ವೆಂಕಟೇಶ್, ಮಂಡ್ಯ ಕೃಷ್ಣಪ್ಪ, ಮೋಹನ್ ರೂಪಕೃಷ್ಣಪ್ಪ, ಸರಸ್ವತಮ್ಮ, ದಾಸ್ ಪ್ರಕಾಶ್, ನಾಗರಾಜ್, ಸುರೇಂದ್ರ, ಹರೀಶ್ ಬಾಬು, ನಾರಾಯಣಸ್ವಾಮಿ, ಮಂಜುನಾಥ್ ಮಾಧ್ಯಮಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

Related Articles

Back to top button
error: Content is protected !!