ಇತರೆ

ಮಾರುತಿ ವ್ಯಾನ್ ಗೆ ಬಸ್ ಡಿಕ್ಕಿ: ದಂಪತಿ ಸಾವು, 10ಕ್ಕೂ ಅಧಿಕ ಮಂದಿಗೆ ಗಾಯ

Views: 0

ತುಮಕೂರು, ಖಾಸಗಿ ಬಸ್ ಮಾರುತಿ ವ್ಯಾನ್ ಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ದಂಪತಿ ಸಾವನ್ನಪ್ಪಿದ್ದು, 10ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಮರಳೂರು ಕೆರೆ ಏರಿ ಮೇಲೆ ನಡೆದಿದೆ.

ತಾಲ್ಲೂಕಿನ ಮಾನಂಗಿ ಗ್ರಾಮದ ನಿವಾಸಿ ಸುರೇಶ್ ಮತ್ತು ಪತ್ನಿ ಸುಮಾ ಎಂಬುವರೇ ಮೃತಪಟ್ಟಿರುವ ದುರ್ದೈವಿ ದಂಪತಿಗಳು.

ತುಮಕೂರಿನಿಂದ ಮಾನಂಗಿ ಗ್ರಾಮಕ್ಕೆ ಸುರೇಶ್ ದಂಪತಿಗಳು ಮಾರುತಿ ವ್ಯಾನ್ ನಲ್ಲಿ ತೆರಳುತ್ತಿದ್ದರು. ಮಾರ್ಗ ಮಧ್ಯೆ ಮರಳೂರು ಕೆರೆ ಏರಿ ಮೇಲೆ ಅತಿ ವೇಗವಾಗಿ ಅಜಾಗರೂಕತೆಯಿಂದ ಬಂದ ಖಾಸಗಿ ಬಸ್ ಮಾರುತಿ ವ್ಯಾನಿಗೆ ಮುಖಾಮುಖಿಯಾಗಿ ಅಪ್ಪಳಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

ಈ ಅಪಘಾತದಿಂದಾಗಿ ಕಾರು ಮತ್ತು ಬಸ್ ನಲ್ಲಿದ್ದ 10ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಖಾಸಗಿ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಮಾರುತಿ ವ್ಯಾನ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕನ ಶವ ವ್ಯಾನ್ ಮುಂಭಾಗದಲ್ಲಿ ಸಿಲುಕಿಕೊಂಡಿತ್ತು.

ಅಪಘಾತದಿಂದಾಗಿ ಮರಳುರು ಕೆರೆ ಏರಿ ಮೇಲೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಮತ್ತು ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ಹೋಗುವ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಘಟನೆಯ ಸುದ್ದಿ ತಿಳಿದ ಕೂಡಲೇ ತುಮಕೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಮಾರುತಿ ವ್ಯಾನ್ ನಲ್ಲಿ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹೊರ ತೆಗೆದು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು.

ಗಾಯಗೊಂಡಿದ್ದವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವಲ್ಲೂ ಪೊಲೀಸರು ಶ್ರಮಿಸಿದ್ದಾರೆ.

ನಂತರ ಅಪಘಾತದಿಂದಾಗಿ ಮರಳೂರು ಕೆರೆ ಏರಿ ಮೇಲೆ ಅಸ್ತವ್ಯಸ್ತಗೊಂಡಿದ್ದ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಖಾಸಗಿ ಬಸ್ ಚಾಲಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Related Articles

Back to top button
error: Content is protected !!