ಯುವಜನ

“ಮನೆಯಲ್ಲಿ ಯಾರೂ ಇಲ್ಲ ಬಾ” ಎಂದು ಪ್ರೇಯಸಿ ಕರೆದಕ್ಕೆ ಯುವಕ ಹೋಗಿ ಹೆಣವಾದ!

Views: 349

ಕನ್ನಡ ಕರಾವಳಿ ಸುದ್ದಿ: ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಆನೂರು ಗ್ರಾಮದಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣವನ್ನು ಕಲಬುರಗಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 10 ಆರೋಪಿಗಳನ್ನು ಬಂಧಿಸಿದ್ದಾರೆ

‘ಮನೆಯಲ್ಲಿ ಯಾರೂ ಇಲ್ಲ ಬಾ’ ಎಂದು ಪ್ರೇಯಸಿ ಫೋನ್ ಮಾಡಿ ಕರೆದಿದ್ದಳು. ಲವರ್ ಕರೆದಿದ್ದಾಳೆ ಎಂದು ಹೋಗಿದ್ದ ಯುವಕ ವಾಪಸ್ ಬರಲೇ ಇಲ್ಲ. ಪ್ರೇಯಸಿಯ ಅಣ್ಣನೇ ಯುವಕನನ್ನು ಕೊಲೆ ಮಾಡಿರುವ ವಿಚಾರ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಜನವರಿ 30 ರಂದು ಆನೂರು ಗ್ರಾಮದಲ್ಲಿ ಖಜೂರಿ ಗ್ರಾಮದ ರಾಹುಲ್ ಎಂಬ ಯುವಕನ ಕೊಲೆಯಾಗಿತ್ತು. ರಾಹುಲ್ ಪ್ರೇಯಸಿ ಭಾಗ್ಯವಂತಿ ಅಣ್ಣ ಪೃಥ್ವಿರಾಜ್ ಆರೋಪಿಯಾಗಿದ್ದಾರೆ. ಎ 1 ಆರೋಪಿ ಪೃಥ್ವಿರಾಜ್ ಸಹೋದರಿ ಭಾಗ್ಯವಂತಿ ಮತ್ತು ರಾಹುಲ್ ಖಜೂರಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಜನವರಿ 30 ರಂದು ರಾತ್ರಿ ಭಾಗ್ಯವಂತಿ ರಾಹುಲ್ಗೆ ಕರೆ ಮಾಡಿ, ʼಮನೆಯವರು ಊರಿಗೆ ಹೋಗಿದ್ದಾರೆ. ಯಾರೂ ಇಲ್ಲ ಬಾ’ ಎಂದು ಕರೆದಿದ್ದಾಳೆ. ಹೀಗಾಗಿ ಆನೂರು ಗ್ರಾಮಕ್ಕೆ ರಾಹುಲ್ ಹೋಗಿದ್ದಾನೆ. ಆ ಸಂದರ್ಭದಲ್ಲಿ ಏಕಾಏಕಿ ಭಾಗ್ಯವಂತಿ ಅಣ್ಣ ಪೃಥ್ವಿರಾಜ್ ಆಗಮಿಸಿದ್ದಾನೆ. ಭಾಗ್ಯವಂತಿ ಮತ್ತು ರಾಹುಲ್ ಒಟ್ಟಿಗೆ ಇರುವುದನ್ನು ಕಂಡು ರೊಚ್ಚಿಗೆದ್ದ ಪೃಥ್ವಿರಾಜ್ ತಂಗಿಗೆ ಬೈದು, ರಾಹುಲ್ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದಾನೆ.

ಕೊಲೆ ಮಾಡಿರುವುದು ಯಾರಿಗೂ ಗೊತ್ತಾಗಬಾರದು ಎಂದು ಸ್ನೇಹಿತನಿಗೆ ಕರೆ ಮಾಡಿ ಆತನ ಬೈಕ್ನಲ್ಲಿಯೇ ರಾಹುಲ್ ಶವ ಇಟ್ಟುಕೊಂಡು ಹೋಗಿ, ಮಹಾರಾಷ್ಟ್ರದ ಸಾಂಗ್ವಿ ಬಳಿ ಬೆಣ್ಣೆತೋರಾ ಹಿನ್ನೀರಿನಲ್ಲಿ ಮೃತದೇಹಕ್ಕೆ ಕಲ್ಲುಕಟ್ಟಿ ಎಸೆದು ಹಾಕಿ ಪರಾರಿಯಾಗಿದ್ದ. ನಂತರ ಕುಂಭಮೇಳ, ಕಾಶಿ ಅಯೋಧ್ಯೆ ಎಂದು ತಂಗಿ ಮತ್ತು ತಾಯಿಯನ್ನು ಕರೆದುಕೊಂಡು ಸುತ್ತಾಡಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ಯುವಕ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಮೊದಲಿಗೆ ಸಂತ್ರಸ್ತನ ಮೊಬೈಲ್ ಲೊಕೇಷನ್ ಟ್ರ್ಯಾಕ್ ಮಾಡಿದ್ದಾರೆ. ಆಗ, ಕೊಲೆಯ ನಡೆದಿರುವ ವಿಚಾರ ತಿಳಿದುಬಂದಿದೆ.ರಾಹುಲ್ ಕೊಲೆ ಸಂಬಂಧ ಒಟ್ಟು 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ.

Related Articles

Back to top button
error: Content is protected !!