ಮದುವೆ ಎಂದರೆ ಪತಿ-ಪತ್ನಿಯ ನಡುವಿನ ಸಹಬಾಳ್ವೆ ಅದೊಂದು ಪವಿತ್ರ “ಬಂಧ” ವಿಚ್ಚೇದನ ಕೋರಿದವರಿಗೆ ನ್ಯಾಯಾಲಯ ನೀತಿ ಪಾಠ
Views: 54
ಕನ್ನಡ ಕರಾವಳಿ ಸುದ್ದಿ: ಮದುವೆ ಎಂದರೆ ಇಬ್ಬರು ವ್ಯಕ್ತಿಗಳು ತಮ್ಮ ಸಂಬಂಧವನ್ನು ಸಾರ್ವಜನಿಕ, ಅಧಿಕೃತ ಮತ್ತು ಶಾಶ್ವತವಾಗಿಸುವ ಪ್ರಕ್ರಿಯೆ. ಇದು ಇಬ್ಬರು ವ್ಯಕ್ತಿಗಳನ್ನು ಸಾವಿನವರೆಗೂ ಉಳಿಯುವ ಬಂಧದಲ್ಲಿ ಸೇರಿಸುತ್ತದೆ.
ಮದುವೆ ಎಂಬುದು ಮಕ್ಕಳಾಟವಲ್ಲ, ಕೇವಲ ಆರೋಪ-ಪ್ರತ್ಯಾರೋಪಗಳ ಆಧಾರದಲ್ಲಿ ಮದುವೆ ಎಂಬ ಪವಿತ್ರ ಬಂಧನವನ್ನು ವಿಭಜಿಸಲು ಸಾಧ್ಯವಿಲ್ಲ ಎಂದು ಸಾರಿರುವ ಹೈಕೋರ್ಟ್, ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದ ಮೇಲ್ಮನವಿಯೊಂದನ್ನು ವಜಾಗೊಳಿಸಿದೆ.
ವಿಚ್ಚೇದನ ಕೋರಿ ಸಲ್ಲಿಸಿದ್ದ ಪತ್ನಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಅರ್ಜಿಯನ್ನು ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾ| ಜಯಂತ್ ಬ್ಯಾನರ್ಜಿ ಮತ್ತು ನ್ಯಾ| ಉಮೇಶ್ ಎಂ.ಅಡಿಗ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಹಿಂದೂ ಧರ್ಮ ಮತ್ತು ಆಚರಣೆಗಳ ಪ್ರಕಾರ ಮದುವೆ ಎಂದರೆ ಪತಿ-ಪತ್ನಿಯ ನಡುವಿನ ಸಹಬಾಳ್ವೆ ಮಾತ್ರವಲ್ಲ ಅದೊಂದು ಪವಿತ್ರ “ಬಂಧ” ಎಂಬುದಾಗಿದೆ. ದಂಪತಿಯು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷದಲ್ಲಿ ಪರಸ್ಪರ ಸಹಕರಿಸಬೇಕು ಎಂಬ ನಂಬಿಕೆ ಮೇಲೆ ಮದುವೆ ಮಾಡಲಾಗಿರುತ್ತದೆ. ಕೇವಲ ಆರೋಪ ಪ್ರತ್ಯಾರೋಪಗಳ ಮೂಲಕ ಈ ಪವಿತ್ರವಾದ ಬಂಧವನ್ನು ವಿಭಜಿಸಲು ಸಾಧ್ಯವಿಲ್ಲ.
ಅಷ್ಟಕ್ಕೂ ಮದುವೆ ಎಂಬುದು ಮಕ್ಕಳಾಟವಲ್ಲ, ವೈವಾಹಿಕ ಜೀವನದಲ್ಲಿ ಪತಿ-ಪತ್ನಿ ಒಬ್ಬರಿಗೊಬ್ಬರ ನಡುವೆ ರಾಜಿ ಮತ್ತು ಹೊಂದಾಣಿಕೆ ಮಾಡಿಕೊಂಡು ಜೀವನ ಮುನ್ನಡೆಸಬೇಕಾಗುತ್ತದೆ ಎಂದೂ ನ್ಯಾಯಾಲಯ ನೀತಿ ಪಾಠ ಹೇಳಿದೆ.






