ಯುವಜನ

ಬಾಲಕಿಗೆ ಅಶ್ಲೀಲ ಸಂದೇಶ:ಮೂವರು ಬಾಲಕರನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿತ 

Views: 131

ಕನ್ನಡ ಕರಾವಳಿ ಸುದ್ದಿ: ಬಾಲಕಿಯೊಬ್ಬಳಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎಂದು ಆರೋಪಿಸಿ ಮೂವರು ಬಾಲಕರನ್ನು  55 ಮಂದಿ ಗುಂಪೊಂದು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿರುವ  ಘಟನೆ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನಲ್ಲಿ ನಡೆದಿದೆ.

ಅಪ್ರಾಪ್ತೆಗೆ ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಮತ್ತು ಚುಡಾಯಿಸಿದ್ದಕ್ಕೆ ಧ್ವಜದ ಕಂಬಕ್ಕೆ ಕಟ್ಟಿಹಾಕಿ ಹಗ್ಗ, ದೊಣ್ಣೆ, ಚಪ್ಪಲಿಯಿಂದ ಮೈ ತುಂಬಾ ಬಾಸುಂಡೆ ಬರುವಂತೆ ಬಾಲಕರ ಮೇಲೆ ಹಲ್ಲೆ ಮಾಡಿದ್ದಾರೆ.

ಈ ಬಗ್ಗೆ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರ ಪೈಕಿ ಒಬ್ಬ ಬಾಲಕನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಇನ್ನಿಬ್ಬರು ನಾಪತ್ತೆಯಾಗಿದ್ದಾರೆ.

ಬಾಲಕರ ಪೋಷಕರು ಮತ್ತು ಸಂಬಂಧಿಕರು 55 ಗ್ರಾಮಸ್ಥರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಿದ್ದರೆ, ಗ್ರಾಮಸ್ಥರು ಮೂವರು ಬಾಲಕರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಬಾಲಕರು ದಲಿತ ಸಮುದಾಯಕ್ಕೆ ಸೇರಿದವರು ಎಂದು ಹೇಳಲಾಗುತ್ತಿದ್ದು, ಜಾತಿ ಸಂಘರ್ಷ ಬೆದರಿಕೆ ಇರುವುದರಿಂದ ಗ್ರಾಮದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ಎರಡೂ ಕಡೆಯವರು ಪ್ರಕರಣಗಳನ್ನು ದಾಖಲಿಸಿರುವುದರಿಂದ, ತನಿಖೆ ನಡೆಸಲಾಗುತ್ತಿದೆ. ಪರಿಸ್ಥಿತಿಯನ್ನು ಶಮನಗೊಳಿಸಲು ಶಾಂತಿ ಸಭೆ ಕರೆಯಲಾಗುವುದು ಎಂದು ನೇಮಗೌಡ ಅವರು ತಿಳಿಸಿದ್ದಾರೆ.

Related Articles

Back to top button
error: Content is protected !!