ಬಾರ್ಕೂರು ಶೆಟ್ಟಿಗಾರ್ ಇಂಡಸ್ಟ್ರೀಸ್ ಗಣೇಶೋತ್ಸವ: ಧಾರ್ಮಿಕ ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ಸಹಾಯಧನ ವಿತರಣೆ

Views: 280
ಕನ್ನಡ ಕರಾವಳಿ ಸುದ್ದಿ : ಬಾರ್ಕೂರು ರಂಗನಕೇರಿ ಶೆಟ್ಟಿಗಾರ್ ಇಂಡಸ್ಟ್ರೀಸ್ 20ನೇ ಸಾರ್ವಜನಿಕ ಗಣೇಶೋತ್ಸವ ಅಗಸ್ಟ್ 27ರಿಂದ ಆರಂಭಗೊಂಡು 29ರವರೆಗೆ ವಿಜೃಂಭಣೆಯಿಂದ ನಡೆಯಿತು.ಅಗಸ್ಟ್ 28ರಂದು ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ್ ಸಿ ಕುಂದರ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಜಾತಿ ಮತ ಪಂಥಗಳ ಭೇದವಿಲ್ಲದೆ ಧಾರ್ಮಿಕ ಪ್ರಜ್ಞೆ ಮೂಡಿಸಿ ನಾವೆಲ್ಲರೂ ಒಂದೇ ಎನ್ನುವ ಭಾವದಿಂದ ಆಚರಿಸುವ ಗಣೇಶೋತ್ಸವದಲ್ಲಿ ಕಲೆ, ಸಂಸ್ಕೃತಿ ಮತ್ತು ಸಮಾಜದ ಒಗ್ಗಟ್ಟಿಗೆ ಸಹಕಾರಿಯಾಗಿದೆ. ಈ ಮೂಲಕ ದೇವರಲ್ಲಿ ಶೃದ್ಧೆ ಭಕ್ತಿಯಿಂದ ನಂಬಿಕೆ ಇಟ್ಟಾಗ ನಮ್ಮ ಇಷ್ಟಾರ್ಥ ನೆರವೇರುತ್ತದೆ ಎಂದರು.
ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಬಿ.ಉಮೇಶ್ ಆಚಾರ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಬಾರಕೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಉತ್ಸವ ಸಮಿತಿಯ ಅಧ್ಯಕ್ಷ ಬಿ ಶಾಂತರಾಮ್ ಶೆಟ್ಟಿ, ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ) ಇದರ ಅಧ್ಯಕ್ಷರಾದ ರವಿ ಶೆಟ್ಟಿಗಾರ್ ಕಾರ್ಕಳ, ಮಂದಾರ್ತಿ ನಮಸ್ತೆ ಭಾರತ ಟ್ರಸ್ಟ್ ನ ಪ್ರಮೋದ್ ಮಂದಾರ್ತಿ, ಉದ್ಯಮಿಗಳಾದ ರಾಜಾರಾಮ್ ಶೆಟ್ಟಿ, ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇಗುಲದ ಶ್ರೀ ವೀರೇಶ್ವರ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿಗಾರ್ ಮಣಿಪಾಲ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮುಳುಗು ತಜ್ಞರು ಮತ್ತು ಸಮಾಜ ಸೇವಕರಾದ ಈಶ್ವರ್ ಮಲ್ಪೆ, ಹೊಸಬೆಳಕು ಸೇವಾ ಟ್ರಸ್ಟ್ ಶ್ರೀಮತಿ ತನುಲಾ ತರುಣ್ ಅವರನ್ನು ಸನ್ಮಾನಿಸಲಾಯಿತು.
ಸಾಧಕರಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಭಾಗವತ ಹಿರಿಯಣ್ಣ ಶೆಟ್ಟಿಗಾರ್ ಮಂದಾರ್ತಿ, ಕರುನಾಡ ಕಲ್ಪವೃಕ್ಷ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ವಿವೇಕಾನಂದ ಶೆಟ್ಟಿಗಾರ ಬಸ್ರೂರು, ಕನ್ನಡ ಕರಾವಳಿ ಸಂಪಾದಕ ಸುಧಾಕರ್ ವಕ್ವಾಡಿ, ಗಾಯಕರು ಮತ್ತು ಯೂಟ್ಯೂಬರ್ಸ್ ರಾಜೇಶ್ ಶಾನುಭೋಗ್, ನಮ್ಮೂರು ಬಾರಕೂರು ಫೇಸ್ಬುಕ್ ಕಾರ್ಯನಿರ್ವಾಹಕ ಆನಂದ ಕುಮಾರ್ ಬಾರ್ಕೂರು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದಾಂಪತ್ಯ ಜೀವನದ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಲೋಕೇಶ್ ಶೆಟ್ಟಿಗಾರ್ ಮತ್ತು ಶ್ರೀಮತಿ ವಿಶಾಲತಾ ಅವರನ್ನು ಸನ್ಮಾನಿಸಲಾಯಿತು. ಗಣೇಶೋತ್ಸವಕ್ಕೆ ಸಹಕಾರ ನೀಡಿದ ಶ್ರೀಮತಿ ಪವಿತ್ರ ಮತ್ತು ರಾಜ್ ಪ್ರಸಾದ್, ಹರೀಶ್ ಬ್ರಹ್ಮಾವರ, ಉದಯ್ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಅಶಕ್ತರು ಅನಾರೋಗ್ಯ ಪೀಡಿತರು ಬಡ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು.
ಅಕ್ಷಯ ಶ್ರೀಮತಿ ಯಶೋಧ ಶ್ರೀನಿವಾಸ ಶೆಟ್ಟಿಗಾರ್ ಅತಿಥಿಗಳನ್ನು ಗೌರವಿಸಿದರು. ಶ್ಯಾಮಲ, ಲತಾ ಪ್ರಾರ್ಥಿಸಿದರು. ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಬಿ. ಶ್ರೀನಿವಾಸ ಶೆಟ್ಟಿಗಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದಾಮೋದರ್ ಶರ್ಮ ನಿರೂಪಿಸಿದರು. ಸತೀಶ್ ವಂದಿಸಿದರು. ಕಾರ್ಯಕ್ರಮದ ನಂತರ ತೀರ್ಥ ಎಂಬ ಹಾಸ್ಯಮಯ ನಾಟಕ ನಡೆಯಿತು.
ಅಗಸ್ಟ್ 29ನೇ ಶನಿವಾರ ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ ಶೆಟ್ಟಿಗಾರ್ ಇಂಡಸ್ಟ್ರೀಸ್ ನಿಂದ ವಾಹನಗಳ ಮೂಲಕ ಶ್ರೀ ಬಟ್ಟೆ ವಿನಾಯಕ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ವೈಭವದ ಪುರ ಮೆರವಣಿಗೆಯ ಮೂಲಕ ರಂಗನಕೇರಿಯ ಶ್ರೀ ರತ್ನಗರ್ಭಗಣಪತಿ ದೇವಾಲಯದ ಕೆರೆಯಲ್ಲಿ ವಿಸರ್ಜಿಸಲಾಯಿತು.