ಫೆಂಗಲ್ ಚಂಡಮಾರತದಿಂದ ಭಾರೀ ಮಳೆ: ಶಬರಿಮಲೆ ಯಾತ್ರಿಕರಿಗೆ ನಿಷೇಧ
Views: 314
ಕನ್ನಡ ಕರಾವಳಿ ಸುದ್ದಿ: ಶನಿವಾರ ಸಂಜೆ ಆರಂಭವಾದ ಭಾರಿ ಮಳೆ ಸೋಮವಾರವೂ ಎಡೆಬಿಡದೆ ಮುಂದುವರಿದಿದೆ. ಹೀಗಾಗಿ ಶಬರಿಮಲೆಗೆ ಅರಣ್ಯದ ಮೂಲಕ ಕಾಲ್ನಡಿಗೆಯಲ್ಲಿ ಬರುವ ಯಾತ್ರಿಕರಿಗೆ ನಿಷೇಧ ಹೇರಲಾಗಿದೆ.
ಪುಲ್ಲುಮೇಡುವಿನಿಂದ ಶಬರಿಮಲೆಗೆ 6 ಕಿ.ಮೀ ದೂರ ಇದೆ. ಭಾನುವಾರದಿಂದ ಈ ಅರಣ್ಯ ದಾರಿಯಲ್ಲಿ ದಟ್ಟ ಮಂಜು ಆವರಿಸಿದೆ. ಅಲ್ಲದೇ ಭೂಕುಸಿತ ಉಂಟಾಗುವ ಸಾಧ್ಯತೆಯಿಂದ ಅರಣ್ಯ ಮಾರ್ಗದಲ್ಲಿ ಕಾಲ್ನಡಿಗೆ ನಿಷೇಧಿಸಲಾಗಿದೆ. ಕರಿಮಲ, ಪುಲ್ಲುಮೇಡು ದಾರಿಯಲ್ಲಿ ಸಂಚಾರ ಮಾಡದಂತೆ ತಡೆಯಲಾಗಿದೆ. ಕಾಲ್ನಡಿಗೆ ಯಾತ್ರಿಕರು ನೀಲಕ್ಕಲ್-ಪಂಬಾ ಮೂಲಕ ಶಬರಿಮಲೆಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಅರಣ್ಯ ಮಾರ್ಗದ ಮೂಲಕ ಆಗಮಿಸಿದ್ದ ಭಕ್ತರನ್ನು ವಿಶೇಷ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಪಂಪಾಗೆ ಕರೆದೊಯ್ಯಲಾಗಿದೆ.
ಇನ್ನು ಪಂಪಾದಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆ ಹೆಚ್ಚಿರುವುದರಿಂದ ಭಕ್ತಾದಿಗಳು ನದಿಗಳಿಗೆ ಇಳಿಯುವುದನ್ನು ಕೂಡ ನಿಷೇಧಿಸಲಾಗಿದೆ. ಅಲ್ಲದೇ ಯಾವುದೇ ತಕ್ಷಣದ ಅಪಾಯವಿಲ್ಲದಿದ್ದರೂ, ಭಾರೀ ಮಳೆಯಿಂದ ಉಂಟಾಗುವ ಸಂಭಾವ್ಯ ಅಪಾಯಗಳನ್ನು ಪರಿಗಣಿಸಿ ಕ್ರಮಗಳನ್ನು ಅಳವಡಿಸಲಾಗಿದೆ. ಎರುಮೇಲಿಯಲ್ಲಿ ಮಣ್ಣು ಕುಸಿದು ಬಿದ್ದಿದ್ದ ಪ್ರದೇಶವನ್ನು ತೆರವುಗೊಳಿಸಲಾಗಿದ್ದು, ಸಂಚಾರ ಆರಂಭಿಸಲಾಗಿದೆ.