ಪಿಎಂ ಕಿಸಾನ್ ಸಮ್ಮಾನ್ ಯೋಜನೆ: 17ನೇ ಕಂತಿನ ಹಣ ಜೂನ್ 18 ರಂದು ಬಿಡುಗಡೆ
Views: 51
ನವದೆಹಲಿ:ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನರೇಂದ್ರ ಮೋದಿ ಅವರು ಮೊದಲು ಸಹಿ ಹಾಕಿದ್ದೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಕಡತಕ್ಕೆ. ಅದರ 17ನೇ ಕಂತಿನ ಹಣ ಜೂನ್ 18 ರಂದು ದೇಶದ ರೈತರ ಖಾತೆಗೆ ಬೀಳಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 18 ರಂದು ಉತ್ತರಪ್ರದೇಶದ ವಾರಾಣಸಿಗೆ ಭೇಟಿ ನೀಡಲಿದ್ದು, ರೈತರಿಗೆ ನೀಡಬೇಕಾದ ಹಣವೂ ಅಂದೇ ಬಿಡುಗಡೆಯಾಗಲಿದೆ. ದೇಶದ 9.26 ಕೋಟಿ ರೈತ ಫಲಾನುಭವಿಗಳಿಗೆ 20 ಸಾವಿರ ಕೋಟಿ ರೂಪಾಯಿ 17ನೇ ಕಂತಿನ ಹಣ ಕೈಸೇರಲಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಕಳೆದ ಎರಡು ಅಧಿಕಾರಾವಧಿಯಲ್ಲಿ ಪ್ರಧಾನಿ ಮೋದಿ ಅವರು ಕೃಷಿಗೆ ಆದ್ಯತೆ ನೀಡಿದ್ದರು. ರೈತರ ಹಿತದೃಷ್ಟಿಯಿಂದ ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ, ಮೋದಿ ಅವರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಕಡತಕ್ಕೆ ಸಹಿ ಹಾಕಿದ್ದರು ಎಂದರು.