ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ; ಮನನೊಂದ ದಂಪತಿ ಆತ್ಮಹತ್ಯೆ

Views: 0
ಲಕ್ನೋ: ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆಯ ಹಿನ್ನೆಲೆಯಲ್ಲಿ ನೊಂದ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 30 ವರ್ಷದ ಪತಿ ಹಾಗೂ 27 ವರ್ಷದ ಪತ್ನಿ ಗುರುವಾರ ಮುಂಜಾನೆ ವಿಷ ಸೇವಿಸಿದ್ದಾರೆ. ಪತಿ ಅದೇ ದಿನ ಮೃತಪಟ್ಟಿದ್ದರೆ, ಪತ್ನಿ ಗೋರಖ್ ಪುರ ಆಸ್ಪತ್ರೆಯಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ ಎಂದು ಬಸ್ತಿ ಎಸ್ಪಿ ಗೋಪಾಲಕೃಷ್ಣ ವಿವರಿಸಿದ್ದಾರೆ.
ಸೆಪ್ಟೆಂಬರ್ 21ರಂದು ರಾತ್ರಿ ಪತ್ನಿಯ ಮೇಲೆ ಇಬ್ಬರು ಅತ್ಯಾಚಾರ ಎಸಗಿದ್ದರು ಎಂದು ಸಂಬಂಧಿಕರು ಆಪಾದಿಸಿದ್ದಾರೆ. ಆತ್ಮಹತ್ಯೆಗೆ ಶರಣಾಗುವ ಮುನ್ನ ದಂಪತಿ ವಿಡಿಯೊ ಚಿತ್ರೀಕರಿಸಿರುವ ದಂಪತಿ, ಆರೋಪಿಗಳ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯ ಸಹೋದರ ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 376 ಡಿ ಮತ್ತು 306ರ ಅನ್ವಯ ಸಾಮೂಹಿಕ ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಾದ ಆದರ್ಶ (25) ಮತ್ತು ತ್ರಿಲೋಕಿ (47) ಎಂಬುವವರನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ. “ಶುಕ್ರವಾರ ಬೆಳಿಗ್ಗೆ ನಾವು ಶಾಲೆಗೆ ಹೊರಡಲು ಸಿದ್ಧವಾದಾಗ ತಂದೆ- ತಾಯಿ ವಿಷಸೇವಿಸಿದ್ದಾಗಿ ಮತ್ತು ಕೆಲವೇ ಹೊತ್ತಿನಲ್ಲಿ ಕೊನೆಯುಸಿರೆಳೆಯುತ್ತೇವೆ ಎಂದು ಹೇಳಿದರು” ಎಂದು ಮೃತರ ಮಕ್ಕಳು ಪೊಲೀಸರಿಗೆ ವಿವರಿಸಿದ್ದಾರೆ. ಈ ದಂಪತಿಗೆ ಎಂಟು ಹಾಗೂ ಆರು ವರ್ಷದ ಇಬ್ಬರು ಪುತ್ರರು ಮತ್ತು ಒಂದೂವರೆ ವರ್ಷದ ಪುತ್ರಿ ಇದ್ದಾರೆ






