ತಾಳಿ ಕಟ್ಟುವ ವೇಳೆ ನನಗೆ ಈ ಮದುವೆ ಇಷ್ಟವಿಲ್ಲ ಎಂದ ವಧು !!!

Views: 170
ಉಪ್ಪಿನಂಗಡಿ: ಮದುವೆ ಮಂಟಪದಲ್ಲಿ ಕೊನೆಯ ಕ್ಷಣ ವರನಿಂದ ತಾಳಿ ಕಟ್ಟಲು ವಧು ನಿರಾಕರಸಿದ ಕಾರಣ ಮದುವೆ ಮುರಿದು ಬಿದ್ದ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿ ನಡೆದಿದೆ.
ಕೊಣಾಲು ಗ್ರಾಮದ ಕೋಲ್ಪೆ ದಿ। ಬಾಬು ಗೌಡ ಅವರ ಪುತ್ರ ಉಮೇಶ ಅವರ ಮದುವೆಯು ಬಂಟ್ವಾಳ ತಾಲೂಕು ಕುಳ ಗ್ರಾಮದ ಕಂಟ್ರಮಜಲು ದಿ। ಕೊರಗಪ್ಪ ಗೌಡ ಅವರ ಪುತ್ರಿ ಸರಸ್ವತಿ ಅವರೊಂದಿಗೆ ನಿಗದಿಯಾಗಿತ್ತು. ಎ.26 ರಂದು ಬೆಳಗ್ಗೆ 11.35ರ ಮೂಹೂರ್ತದಲ್ಲಿ ಕಾಂಚನ ಪೆರ್ಲದ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಮದುವೆ ನಿಗದಿಯಾಗಿತ್ತು. ಅದರಂತೆ ವರ ಹಾಗೂ ವಧುವಿನ ಕಡೆಯವರು ಮದುವೆಯ ದಿಬ್ಬಣದಲ್ಲಿ ಬಂದಿದ್ದರು. ವಧು ದಾರೆ ಸೀರೆ ಹಾಕಿ ಪರಸ್ಪರ ಹೂಮಾಲೆ ಕೂಡ ಹಾಕಿದ್ದರು. ಆದರೆ ತಾಳಿ ಕಟ್ಟಲು ಮುಂದಾದಾಗ ನನಗೆ ಈ ಮದುವೆ ಇಷ್ಟವಿಲ್ಲ ಎಂದು ವಧು ಹೇಳಿದ್ದಾಳೆ.
ಇದರಿಂದ ಎರಡೂ ಕಡೆಯವರು ಕಂಗಾಲಾಗಿ ವಧುವಿನ ಮನವೊಲಿಕೆಗೆ ಮುಂದಾದರು. ಆದರೆ ವಧು ಒಪ್ಪಲಿಲ್ಲ. ಬಳಿಕ ಎರಡೂ ಕಡೆ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿದರು.
ಪೊಲೀಸ್ ಠಾಣೆಯಲ್ಲಿ ನಡೆದ ಮಾತುಕತೆ ವೇಳೆ ವಧು ಮತ್ತೆ ಮದುವೆ ಆಗಲು ಒಪ್ಪಿದ್ದರು. ಆದರೆ ವರ ಉಮೇಶ್ ಅವರು ಮದುವೆ ಆಗಲು ನಿರಾಕರಿಸಿದರು. ಇದರಿಂದಾಗಿ ಎರಡೂ ಕಡೆಯವರು ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆಯಿಸಿಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳಿದರು.






