ಡಿ.26 – ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ಸನ್ನಿಧಿಯಲ್ಲಿ ಕಿರಿಷಷ್ಠಿ
Views: 88
ಕನ್ನಡ ಕರಾವಳಿ ಸುದ್ದಿ: ಎರಡನೇ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಎಂಬ ಖ್ಯಾತಿಯ ಕಾಳಾವರದ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ಸನ್ನಿಧಿಯಲ್ಲಿ ಕಿರಿಷಷ್ಠಿ ಅಥವಾ ಸ್ಕಂದಷಷ್ಠಿ ಇದೇ ಡಿ. 26 ರ ಶುಕ್ರವಾರ ನಡೆಯಲಿದೆ.
ಶುಕ್ರವಾರ ನಸುಕಿನ 4 ಗಂಟೆಗೆ ಅಭಿಷೇಕ, ಪಂಚಾಮೃತ ಪೂಜೆ, ಮಂಗಳಾರತಿ ನಡೆಯುತ್ತದೆ. 4.30 ರಿಂದ ಹಣ್ಣುಕಾಯಿ, ಹೂವು ಕಾಯಿ, ಕಲಶ ಸಮರ್ಪಣೆ, ಕರ್ಪೂರ ಆರತಿ, ದೇವರ ಸಂದರ್ಶನ, ತುಲಾಭಾರ ಸೇವೆ, ತೀರ್ಥ ಪ್ರಸಾದ ವಿತರಣೆ ನಡೆಯುತ್ತದೆ.
ಸನ್ನಿಧಿಯಲ್ಲಿ ಉರುಳು ಸೇವೆಯೂ ನಡೆಯುತ್ತಿದ್ದು, ಸೇವೆ ಸಲ್ಲಿಸುವವರು ಸೇವಾ ಕೌಂಟರಿನಲ್ಲಿ ಹೆಸರು ನೋಂದಾಯಿಸಿಕೊಂಡು ಸೇವಾ ಚೀಟಿ ಪಡೆದುಕೊಳ್ಳಬೇಕು.
ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ನಂತರ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 7 ಗಂಟೆಯಿಂದ 12ರವರೆಗೆ ಹಾಲಾಡಿ ಮೇಳದವರಿಂದ ಕಾಲಮಿತಿ ಯಕ್ಷಗಾನ ನಡೆಯಲಿದೆ.
ಶ್ರೀ ಕ್ಷೇತ್ರದಲ್ಲಿ ಕಳೆದ ನ. 26 ಮತ್ತು 27 ಎರಡು ದಿನಗಳ ಹಿರಿಷಷ್ಠಿ ಮಹೋತ್ಸವ ನಡೆದಿತ್ತು. ಇದನ್ನು ಚಂಪಾಷಷ್ಠಿ ಎಂದು ಕರೆಯಲಾಗುತ್ತದೆ.
ಇದೀಗ ನಡೆಯುವ ಕಿರಿಷಷ್ಠಿ ಮಹೋತ್ಸವಕ್ಕಾಗಿ ಕ್ಷೇತ್ರದಲ್ಲಿ ಎಲ್ಲ ವ್ಯವಸ್ಥೆಗಳನ್ನೂ ಸಜ್ಜುಗೊಳಿಸಲಾಗಿದೆ. ಈಗಾಗಲೇ ವ್ಯವಸ್ಥಾಪನಾ ಸಮಿತಿಯು ಅಜಿತ್ ಕುಮಾರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಭೆಗಳನ್ನು ನಡೆಸಿ ವ್ಯವಸ್ಥೆಗಳ ಬಗ್ಗೆ ಚರ್ಚಿಸಲಾಗಿದೆ. ದೂರ ದೂರದಿಂದಲೂ ಆಗಮಿಸುವ ಭಕ್ತಾದಿಗಳ ಅನುಕೂಲತೆ, ಸುಗಮ ದರ್ಶನಕ್ಕಾಗಿ ಸರ್ವ ವ್ಯವಸ್ಥೆಗಳನ್ನೂ ಕೈಗೊಳ್ಳಲಾಗಿದೆ.






