ಜೂನ್ 1ರಂದು ಭಾರತಕ್ಕೆ ಮುಂಗಾರು ಪ್ರವೇಶ, ಕರ್ನಾಟಕಕ್ಕೆ ಯಾವಾಗ?
Views: 68
ಹೊಸದಿಲ್ಲಿ : ಹವಾಮಾನ ಇಲಾಖೆ ಶುಭಸುದ್ದಿ ನೀಡಿದ್ದು, ಪ್ರಸಕ್ತ ಸಾಲಿನ ಮುಂಗಾರು ಮಾರುತ ಜೂನ್ 1ರಂದೇ ಕೇರಳ ಪ್ರವೇಶಿಸಲಿದೆ ಎಂದು ಹೇಳಿದೆ.
ಮೇ 19ರಂದು ನೈರುತ್ಯ ಮುಂಗಾರು ಮಾರುತವು ದಕ್ಷಿಣ ಅಂಡಮಾನ್, ಬಂಗಾಳ ಕೊಲ್ಲಿಯ ಆಗ್ನೇಯ ಭಾಗ ಹಾಗೂ ನಿಕೋಬಾರ್ ದ್ವೀಪಗಳನ್ನು ಪ್ರವೇಶಿಸಲಿದೆ. ಜೂನ್ 1ರ ವೇಳೆಗೆ ಕೇರಳ ಪ್ರವೇಶಿಸಲಿದೆ. ಜೂನ್ 15ರ ವೇಳೆಗೆ ದೇಶಾದ್ಯಂತ ವ್ಯಾಪಿಸಲಿದೆ ಎಂದು ಇಲಾಖೆ ತಿಳಿಸಿದೆ. ಕೇರಳ ಪ್ರವೇಶಿಸಿದ ಬಳಿಕ ಒಂದೆರಡು ದಿನಗಳಲ್ಲಿ ಕರ್ನಾಟಕದ ಕರಾವಳಿಗೂ ಮುಂಗಾರು ಪ್ರವೇಶಿಸುವ ನಿರೀಕ್ಷೆಯಿದೆ.
ಈ ಬಗ್ಗೆ ಐಎಂಡಿ ನಿರ್ದೇಶಕ ಮೃತ್ಯುಂಜಯ ಮೋಹಾಪಾತ್ರ ಅವರು ಪ್ರತಿಕ್ರಿಯಿಸಿದ್ದು, ಸಾಮಾನ್ಯ ಮುಂಗಾರು ಪ್ರವೇಶದ ದಿನಗಳಲ್ಲೇ ಈ ವರ್ಷವೂ ಭಾರತವನ್ನು ಮುಂಗಾರು ಪ್ರವೇಶಿಸಲಿದೆ. ಸಾಮಾನ್ಯವಾಗಿ ಪೋರ್ಟ್ ಬ್ಲೇರ್‌ನಲ್ಲಿ ಮೇ 20ರಂದು ಮುಂಗಾರು ಪ್ರವೇಶ ಆಗುತ್ತಿತ್ತು. ಆದರೆ, ಈ ಬಾರಿ ಒಂದು ದಿನ ಮುಂಚಿತವಾಗಿಯೇ ಈ ಪ್ರದೇಶಕ್ಕೆ ಮುಂಗಾರು ಮಾರುತಗಳ ಆಗಮನವಾಗಲಿದೆ ಎಂದು ಹೇಳಿದ್ದಾರೆ.
ಅಂಡಮಾನ್‌ನಲ್ಲಿ ಬೇಗ ಮುಂಗಾರು ಪ್ರವೇಶಿಸಿದರು ಕೂಡ ಕೇರಳಕ್ಕೆ ಜೂನ್ 1ರಂದು ಮುಂಗಾರು ಮಾರುತ ಪ್ರವೇಶಿಸಲಿದೆ ಎಂದು ಐಎಂಡಿಯ ಹವಾಮಾನ ವರದಿ ವಿಭಾಗ ಪುಣೆಯ ಮುಖ್ಯಸ್ಥ ಡಾ ಮೇಧಾ ಕೋಳೆ ಹೇಳಿದ್ದಾರೆ.