ಚನ್ನಪಟ್ಟಣ ಉಪಚುನಾವಣೆ: ಅಚ್ಚರಿಯ ಹೇಳಿಕೆ ಕೊಟ್ಟ ಮಾಜಿ ಸಂಸದ ಡಿಕೆ ಸುರೇಶ್ ಕುಮಾರ್!

Views: 196
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಡಿಕೆ ಸುರೇಶ್ ಅವರು ತಮ್ಮ ಸೋಲಿನಿಂದ ಬೇಸತ್ತಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಹೀಗಾಗಿಯೇ ಚನ್ನಪಟ್ಟಣ ಉಪಚುನಾವಣೆಯಲ್ಲಿ ತಾವೇ ಕಣಕ್ಕಿಳಿಯುವ ಬಗ್ಗೆ ಮಾತನಾಡಿದ್ದಾರೆ
ಆದರೆ, ಲೋಕಸಭಾ ಚುನಾವಣಾ ಸೋಲಿನಿಂದ ಒತ್ತಡದಲ್ಲಿದ್ದ ಮಾಜಿ ಸಂಸದ ಡಿಕೆ ಸುರೇಶ್ ರಾಜಕೀಯದಿಂದ ದೂರ ಸರಿಯುವ ಬಗ್ಗೆ ಮಾತನಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಮಂಡ್ಯ ಸಂಸದ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ಉಪಚುನಾವಣೆಯಲ್ಲಿ ತಾವು ನಿಲ್ಲುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ
ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮಾಜಿ ಸಂಸದ ಡಿಕೆ ಸುರೇಶ್, ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಜನ ನನಗೆ ರೆಸ್ಟ್ ಕೊಟ್ಟಿದ್ದಾರೆ, ರೆಸ್ಟ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ನಾನು ಚುನಾವಣೆಗೆ ನಿಲ್ಲುವುದು ಇದೆಲ್ಲವೂ ಮಾಧ್ಯಮಗಳ ಊಹಾಪೋಹವಷ್ಟೇ. ಚುನಾವಣೆ ಸೋಲಿನಿಂದ ನಾನು ಒತ್ತಡದಲ್ಲಿದ್ದೆ, ಸದ್ಯ ಅದರಿಂದ ಹೊರಗಡೆ ಬಂದಿದ್ದೇನೆ ಎಂದಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಆಘಾತ ನೀಡಿದೆ.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿಕೆ ಸುರೇಶ್ ಸ್ಪರ್ಧೆ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, “ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರ ನನ್ನ ಮುಂದೆ ಇಲ್ಲ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿ ಹಾಗೂ ಡಿಸಿಎಂ ತೀರ್ಮಾನ ತೆಗೆದುಕೊಳ್ಳುತ್ತಾರೆ” ಎಂದಿದ್ದಾರೆ.
ಇನ್ನು, ಚನ್ನಪಟ್ಟಣದಿಂದ ಉಪಮುಖ್ಯಮಂತ್ರಿ, ಸಹೋದರ ಡಿಕೆ ಶಿವಕುಮಾರ್ ಸ್ಪರ್ಧಿಸುವ ಬಗ್ಗೆ ಮಾತನಾಡಿರುವ ಅವರು, ಡಿಕೆ ಶಿವಕುಮಾರ ಸ್ಪರ್ಧಿಸುವ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಡಿಕೆಶಿ ಅವರು ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನಹರಿಸಿದ್ದಾರೆ ಎಂದಿದ್ದಾರೆ. ಸೂಕ್ತ ಅಭ್ಯರ್ಥಿಯನ್ನ ನಮ್ಮ ಪಕ್ಷ ಕಣಕ್ಕಿಳಿಸುತ್ತೆ. ನಾನೂ ಕೂಡಾ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.






