ಧಾರ್ಮಿಕ

ಗಣೇಶೋತ್ಸವ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಿದ್ದ ಇಬ್ಬರು ಹಠಾತ್ ಹೃದಯಾಘಾತಕ್ಕೆ ಬಲಿ

Views: 178

ಕನ್ನಡ ಕರಾವಳಿ ಸುದ್ದಿ: ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ವೇಳೆ ನೃತ್ಯ ಮಾಡುವಾಗ ಇಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಎರಡು ಪ್ರತ್ಯೇಕ ಘಟನೆಗಳು ಮಂಡ್ಯ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದಿವೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಜೊತ್ತನಪುರದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಹೃದಯಾಘಾತದಿಂದ ಮಂಜುನಾಥ್ ಮೃತಪಟ್ಟಿದ್ದಾರೆ.

ಗ್ರಾಮದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಯುವಕರ ಜೊತೆ ಡಿಜೆ ಹಾಡಿಗೆ ಮಂಜುನಾಥ್ ಭರ್ಜರಿ ಹೆಜ್ಜೆ ಹಾಕುತ್ತಿದ್ದರು. ಆದರೆ ಹಠಾತ್ ಹೃದಯಾಘಾತದಿಂದ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಜುನಾಥ್ ಅವರ ಕೊನೆಯ ಕ್ಷಣದ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆ ಆಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೋದಗೂರು ಗ್ರಾಮದಲ್ಲಿ ಕೂಡ ನಿನ್ನೆ ರಾತ್ರಿ ಘಟನೆ ನಡೆದಿದೆ. ಗಣೇಶ ವಿಸರ್ಜನೆ ವೇಳೆ ನಾಗವಲ್ಲಿ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದ ವೇಳೆ ವ್ಯಕ್ತಿಗೆ ಹೃದಯಾಘಾತ ಉಂಟಾಗಿ ಮೃತಪಟ್ಟಿದ್ದಾರೆ.

ಲಕ್ಷ್ಮಿಪತಿ (40) ಮೃತಪಟ್ಟವರು, ಗಣೇಶ ವಿಸರ್ಜನೆ ಹಿನ್ನಲೆ ಗ್ರಾಮಸ್ಥರು ಡ್ಯಾನ್ಸ್ ಮಾಡುತ್ತಿದ್ದರು. ಲಕ್ಷ್ಮಿಪತಿ ಕೂಡ ಡ್ಯಾನ್ಸ್ ಮಾಡುತ್ತಿದ್ದು, ಹಠಾತ್ ಹೃದಯಾಘಾತ ಸಂಭವಿಸಿದ್ದು, ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಲಕ್ಷ್ಮಿಪತಿ ಗ್ರಾಮದಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Related Articles

Back to top button
error: Content is protected !!