ಗಣತಿಯ ಸಮೀಕ್ಷೆಯಲ್ಲಿ ವಿವರ ನೀಡಲು ನಿರಾಕರಿಸಿದ ಎನ್ ಆರ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ
Views: 101
ಕನ್ನಡ ಕರಾವಳಿ ಸುದ್ದಿ: ರಾಜ್ಯದಲ್ಲಿ ಸಾಗಿರುವ ಜಾತಿ ಆಧಾರಿತ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಭಾಗಿಯಾಗಿ ತಮ್ಮ ವಿವರಗಳನ್ನು ಹಂಚಿಕೊಳ್ಳಲು ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಮತ್ತು ಅವರ ಪತ್ನಿಯೂ ಆಗಿರುವ ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ನಿರಾಕರಿಸಿದ್ದಾರೆ.
ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಗಣತಿಯ ಸಮೀಕ್ಷೆಯಲ್ಲಿ ತಾವು ಹಾಗೂ ತಮ್ಮ ಕುಟುಂಬದ ಸದಸ್ಯರು ಭಾಗಿಯಾಗುವುದಿಲ್ಲ ಎಂಬ ಸ್ವಯಂ ದೃಢೀಕರಣ ಪತ್ರಕ್ಕೆ ಸಹಿ ಹಾಕಿ, ಆಯೋಗಕ್ಕೆ ನೀಡಿದ್ದಾರೆ.
ರಾಜ್ಯ ಸರ್ಕಾರದ ಈ ಯೋಜನೆಯಲ್ಲಿ ಭಾಗಿಯಾಗಲು ನಿರಾಕರಿಸಿರುವ ಕಾರಣವನ್ನು ತಿಳಿಸಿರುವ ಅವರು, ತಾವು ಯಾವುದೇ ಹಿಂದುಳಿತದ ವರ್ಗಕ್ಕೆ ಸೇರಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ಗಣತಿಯ ಸಮೀಕ್ಷೆಯಲ್ಲಿ ಭಾಗಿಯಾಗುವುದರಿಂದ ಯಾವುದೇ ಕೊಡುಗೆ ನೀಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ತಾವು ಸಮೀಕ್ಷೆಯಲ್ಲಿ ಭಾಗಿಯಾಗುತ್ತಿಲ್ಲ ಎಂದು ವಿವರಣೆಯನ್ನು ನೀಡಿ ನಾರಾಯಣ ಮೂರ್ತಿ ಅವರು ಪತ್ರಕ್ಕೆ ಸಹಿ ಹಾಕಿ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.
ವೈಯಕ್ತಿಕ ಕಾರಣಗಳ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದಂಪತಿ ತಿಳಿಸಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಮ್ಮ ವಿವರಗಳನ್ನು ಬಹಿರಂಗಪಡಿಸಲು ಅವರು ಒಪ್ಪಿಲ್ಲ.
ಅದು ಅವರ ಆಯ್ಕೆ ಎಂದ ಡಿಸಿಎಂ ಡಿಕೆಶಿ: ಮೂರ್ತಿ ದಂಪತಿಗಳು ಸಮೀಕ್ಷೆಯಲ್ಲಿ ಭಾಗಿಯಾಗಲು ನಿರಾಕರಿಸಿರುವ ನಿರ್ಧಾರದ ಕುರಿತು ಪ್ರಶ್ನೆಗೆ ಉತ್ತರಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಇದು ವೈಯಕ್ತಿಕ ವಿಚಾರ. ಯಾರನ್ನೂ ಭಾಗಿಯಾಗಿ ಎಂದು ನಾವು ಒತ್ತಾಯಿಸಲು ಸಾಧ್ಯವಿಲ್ಲ. ಅದು ಅವರ ಆಯ್ಕೆ ಎಂದು ತಿಳಿಸಿದ್ದಾರೆ.






