ಧಾರ್ಮಿಕ

ಕೋಟೇಶ್ವರ:13ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವಕ್ಕೆ ಚಾಲನೆ 

Views: 197

ಕನ್ನಡ ಕರಾವಳಿ ಸುದ್ದಿ:ಸಪ್ತ ಮೋಕ್ಷದಾಯಕ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರವು ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳ ನೆಲೆಯಾಗಿದೆ. ಇಲ್ಲಿನ ಪ್ರತಿ ಉತ್ಸವ, ಪೂಜೆ, ಕಾರ್ಯಕ್ರಮಗಳೂ ವೈಶಿಷ್ಟ್ಯಪೂರ್ಣವಾಗಿರುತ್ತವೆ. ಇಂತಹ ಮಹೋತ್ಸವಗಳಲ್ಲೊಂದಾದ 13ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಇಂದು ಸರ್ವರ ಸಹಭಾಗಿತ್ವದಲ್ಲಿ ಚಾಲನೆಗೊಂಡಿದೆ ಎಂದು ಧಾರ್ಮಿಕ ಚಿಂತಕ, ಲೇಖಕ, ಶ್ರೀ ಮುಖ್ಯಪ್ರಾಣ ದೇವಳದ ಪ್ರಧಾನ ಅರ್ಚಕ ವೈ ಎನ್ ವೆಂಕಟೇಶಮೂರ್ತಿ ಭಟ್ ಹೇಳಿದರು.

ಕೋಟೇಶ್ವರ ರಥಬೀದಿಯಲ್ಲಿ ನಡೆಯುವ 13ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಾರಂಭಗಳನ್ನು ಸೋಮವಾರ ರಾತ್ರಿ ಉದ್ಘಾಟಿಸಿ ಅವರು ಶುಭ ಹಾರೈಸಿದರು.

ನವರಾತ್ರಿಯ ಪರ್ವ ಕಾಲದಲ್ಲಿ ನವ ವಿಧದ ದೇವಿಯರನ್ನು ನವ ರಾತ್ರಿಗಳಲ್ಲಿ ನವ ವಿಧವಾಗಿ ಪೂಜಿಸಿ ಆರಾಧಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಪ್ರತಿ ಆಚರಣೆ – ಪೂಜೆಗಳಿಗೂ ವಿಶಿಷ್ಟ ಕಾರಣ, ಅರ್ಥಗಳಿವೆ. ಅವನ್ನು ಅರಿತು ಪೂಜೆ, ವೃತಾಚರಣೆಗಳನ್ನು ಮಾಡಬೇಕು. ಹತ್ತನೆಯ ದಿನದ ವಿಜಯ ದಶಮಿ ಆಚರಣೆಯೂ ತುಂಬಾ ಅರ್ಥವತ್ತಾಗಿದೆ. ಶ್ರೀರಾಮ ದುಷ್ಟ ರಾವಣನನ್ನು ಸಂಹರಿಸಿದ್ದು, ಲೋಕ ಕಂಟಕನಾಗಿದ್ದ ಮಹಿಷಾಸುರನನ್ನು ದೇವಿ ನಿಗ್ರಹಿಸಿದ್ದು, ಅಧರ್ಮಿ ಕೌರವರನ್ನು ಪಾಂಡವರು ಸದೆಬಡಿದಿದ್ದು, ಶ್ರೀ ವಾಯು – ಭೀಮ ದೇವರ ಅವತಾರವಾದ ಶ್ರೀ ಮಧ್ವಾಚಾರ್ಯರು ಮನುಕುಲದ ಉದ್ಧಾರಕ್ಕಾಗಿ ಉಡುಪಿ ಪಾಜಕ ಕ್ಷೇತ್ರದಲ್ಲಿ ಅವತರಿಸಿದ್ದು ಎಲ್ಲವೂ ಈ ವಿಜಯ ದಶಮಿಯಂದೇ. ಈ ಹಬ್ಬವನ್ನಾಚರಿಸುವ ನಾವು ನಮ್ಮೊಳಗಿನ ಅರಿಷಡ್ವರ್ಗಗಳೆಂಬ ರಾಕ್ಷಸರನ್ನು ಗೆದ್ದು, ವಿಜಯ ದಶಮಿಯಂದು ವಿಜಯೋತ್ಸವವನ್ನು ಆಚರಿಸಬೇಕು. ಹಬ್ಬಾಚರಣೆ ಮಾಡುವಾಗ ಮಕ್ಕಳೂ ಸೇರಿದಂತೆ ಕುಟುಂಬದವರೆಲ್ಲರೂ ಕಲೆತು ಸಂಭ್ರಮಿಸಬೇಕು ಎಂದವರು ಕರೆ ನೀಡಿದರು.

ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ, ಅಧ್ಯಾಪಕ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಧಾರ್ಮಿಕ ಸಂದೇಶ ನೀಡಿದರು. ಮಂಕುತಿಮ್ಮನ ಕಗ್ಗಗಳನ್ನು ಹೇಳಿದ ಅವರು, ಅವುಗಳಲ್ಲಿನ ಧರ್ಮ ಸೂಕ್ಷ್ಮವನ್ನು ವಿವರಿಸಿದರು.

ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಗೋಪಾಡಿಯ ಜೀವಿ ವೆಂಕಟೇಶ್ ಆಚಾರ್ ಸಭಾಧ್ಯಕ್ಷತೆ ವಹಿಸಿದ್ದರು.

ಸಮಿತಿ ಕಾರ್ಯದರ್ಶಿ ಪ್ರಭಾಕರ ಶೆಟ್ಟಿಗಾರ್ ಮಾತನಾಡಿ ಉತ್ಸವಗಳ ಯಶಸ್ಸಿಗೆ ಶ್ರಮಿಸಿದವರನ್ನು ಸ್ಮರಿಸಿದರು.

ಶ್ರೀ ಶಾರದಾ ದೇವಿಯ ಎದುರು ಫೋಟೋ ಕ್ಲಿಕ್ಕಿಸುವ ವಿಶಿಷ್ಟ ಸ್ಪರ್ಧೆಯನ್ನು ಆಯೋಜಿಸಿದ್ದು, ವಿಜೇತರಾದ ಉಷಾ ರಮೇಶ್, ಉಡುಪಿ, ಶ್ರೀನಿಧಿ ಮತ್ತು ಗೆಳತಿಯರು, ಎನ್ ಆರ್ ಎ ಎಮ್ ಆಸ್ಪತ್ರೆ, ಕೋಟೇಶ್ವರ, ಸುಜಾತಾ ಮತ್ತು ಕುಟುಂಬ, ಸುರೇಶ್ ಕೋಟೇಶ್ವರ ಮತ್ತು ಅನನ್ಯ ಹಾಗೂ ತಂಡ ಇವರುಗಳಿಗೆ ಪುರಸ್ಕಾರಗಳನ್ನು ನೀಡಲಾಯಿತು.

ಸಮಿತಿಯ ಗೌರವಾಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಮಾರ್ಕೋಡು, ಉಪಾಧ್ಯಕ್ಷೆ ವಾಣಿಶ್ರೀ ಹೆಬ್ಬಾರ್, ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್, ಪೂರ್ವಾಧ್ಯಕ್ಷ ವಾದಿರಾಜ್ ಹೆಬ್ಬಾರ್, ಸುಬ್ಬಣ್ಣ ಶೆಟ್ಟಿ ಮಾರ್ಕೋಡು, ಸುಜಾತಾ ರಮೇಶ್, ನಾರಾಯಣ ಪೈಂಟರ್, ಸಾಂಸ್ಕೃತಿಕ ಕಾರ್ಯದರ್ಶಿ ಶಾರದಾ ಮೂಡು ಗೋಪಾಡಿ, ಸಂಘಟನಾ ಕಾರ್ಯದರ್ಶಿ ಉಷಾ ಬಂಗೇರ ಇನ್ನಿತರರು ಉಪಸ್ಥಿತರಿದ್ದರು.

ಬೆಳಿಗ್ಗೆಯ ಶುಭ ಮುಹೂರ್ತದಲ್ಲಿ ವೇದಮೂರ್ತಿ ಕುಂಭಾಸಿ ನಾಗರಾಜ ಭಟ್ ಪೌರೋಹಿತ್ಯದಲ್ಲಿ ವೈಭವದ ಪುರ ಮೆರವಣಿಗೆಯ ಮೂಲಕ ಶ್ರೀ ಶಾರದಾ ವಿಗ್ರಹವನ್ನು ಕರೆತಂದು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಸಮಿತಿ ಉಪಾಧ್ಯಕ್ಷ ರಾಜೇಶ್ ಶೇರಿಗಾರ್ – ಮಮತಾ ದಂಪತಿ ಕೊಡಮಾಡಿದ ರಜತ ನವಿಲನ್ನು ಶ್ರೀ ದೇವಿಗೆ ಸಮರ್ಪಿಸಲಾಯಿತು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಪರಿಸರದ ಯುವ – ಎಳೆಯ ಪ್ರತಿಭೆಗಳ ಪ್ರತಿಭಾ ಪ್ರದರ್ಶನದ ಪ್ರತಿಭೋತ್ಸವ – 2025 ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮ ನಡೆಯಿತು.

Related Articles

Back to top button