ಕೋಟೇಶ್ವರ: ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮ
ವಿಶ್ವಕರ್ಮರು ಅತ್ಯಂತ ಬುದ್ದಿವಂತರು ಆದರೆ ಹೃದಯವಂತರ ಅವಶ್ಯಕತೆ ಇದೆ----ಪ್ರೊ. ಕೆ. ರಾಮರಾಯ ಆಚಾರ್ಯ

Views: 25
ಕನ್ನಡ ಕರಾವಳಿ ಸುದ್ದಿ: ಸಂಘ ಹಾಗೂ ಸಂಘಟನೆಗಳು ಬೆಳೆಯಬೇಕಾದರೆ ಸಮಾನ ಮನಸ್ಕರ ಅವಶ್ಯಕತೆ ಇದ್ದು, ಆಗಿದ್ದಾಗ ಮಾತ್ರ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಲು ಸಹಕಾರಿಯಾಗಿದೆ, ನಾವು ಒಳ್ಳೆಯ ಕೆಲಸಗಳನ್ನು ಮಾಡಿದಾಗ ಪರಮಾತ್ಮನ ಸೇವೆ ಮಾಡಿದಂತಾಗುವುದು, ನಾವು ಯಾವಾಗಲೂ ಕೂಡಾ ಒಳ್ಳೆಯ ಕೆಲಸವನ್ನು ಮಾಡಬೇಕು, ವಿಶ್ವಕರ್ಮರು ಎಂತಹ ಶಿಲೆಯನ್ನು ಮೂರ್ತಿ ಸ್ವರೂಪವನ್ನು ನೀಡಿ ದೇವರನ್ನಾಗಿ ಮಾಡುತ್ತಾರೆ. ಆದರೆ ಮನುಷ್ಯನನ್ನು ಎಷ್ಟು ಕೆತ್ತಿದರೂ ಕೂಡಾ ಸರಿಯಾಗುವುದಿಲ್ಲ ಹಾಗೆಯೇ ಇರುತ್ತಾನೆ. ಮನುಷ್ಯ ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡಿದಾಗ ಅವರನ್ನು ನಿತ್ಯ ಸ್ಮರಣೆಯನ್ನು ಮಾಡುತ್ತಾರೆ. ಅಂತಹ ವ್ಯಕ್ತಿಗಳು ನಾವಾಗಬೇಕಾದ ಅವಶ್ಯಕತೆ ಇದೆ. ವಿಶ್ವಕರ್ಮ ಸಮುದಾಯದಲ್ಲಿ ಅತ್ಯಂತ ಬುದ್ದಿವಂತರಿದ್ದಾರೆ ಆದರೆ ಹೃದಯವಂತರ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಅನೇಕ ಮಾನವೀಯ ಕೆಲಸವನ್ನು ಮಾಡಬೇಕಾಗುತ್ತದೆ. ಜತೆಗೆ ಸಾಧನೆಯನ್ನು ಮಾಡಬೇಕು, ಸಾಧನೆ ಇಲ್ಲದೇ ಸತ್ತರೇ ಸಾವಿಗೆ ಕೂಡಾ ಅಪಮಾನ ಮಾಡಿದಂತೆ ಜತೆಗೆ ಆದರ್ಶವಿಲ್ಲದೆ ಬದುಕಿದರೆ ಆ ಬದುಕಿಗೊಂದು ಅವಮಾನ ಮಾಡಿದ ಹಾಗೆ ಎಂದು ಕಾಳಾವರ ವರದರಾಜ ಎಂ. ಶೆಟ್ಟಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕೋಟೇಶ್ವರ ಇದರ ಪ್ರಾಂಶುಪಾಲ ಪ್ರೊ. ಕೆ. ರಾಮರಾಯ ಆಚಾರ್ಯ ಹೇಳಿದರು.
ಅವರು ಸೆ.16ರಂದು ಕೋಟೇಶ್ವರ ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಶ್ರೀ ವಿಶ್ವಕರ್ಮ ಸಮಾಜ ಯುವಕ ದಳ, ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘ (ರಿ.),ಶ್ರೀ ದೇವಿ ಮಹಿಳಾ ಮಂಡಳಿ ಕೋಟೇಶ್ವರ ಸಹಯೋಗದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಎಸ್. ಸುಬ್ರಹ್ಮಣ್ಯ ಆಚಾರ್ಯ, ಕುಂಭಾಸಿ ಹಾಗೂ ಭರತನಾಟ್ಯ ಕಲಾವಿದೆ ಪ್ರಣಮ್ಯ ಆಚಾರ್ಯ ಅರಸರಬೆಟ್ಟು ಅವರನ್ನು ಗುರುತಿಸಿ ಸಮ್ಮಾನಿಸಲಾಯಿತು.
ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘ (ರಿ.), ಕೋಟೇಶ್ವರ ಇದರ ಅಧ್ಯಕ್ಷ ಕೋಟೇಶ್ವರ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಅವರು ಮಾತನಾಡಿ, ಬದಲಾದ ವೇಗದ ಬದುಕಿನ ನಡುವೆ ನಮ್ಮ ಸಮಾಜದ ಧಾರ್ಮಿಕ ವಿಚಾರದಲ್ಲಿ ಯುವ ಸಮುದಾಯಗಳ ಭಾಗವಹಿಸುವಿಕೆ ಕಡಿಮೆಯಾಗುತ್ತಿದ್ದು ಎಲ್ಲೋ ಎಡವುತ್ತಿದ್ದೇವೆ ಎನ್ನುವ ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಹಾಗೂ ಆಚಾರ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಿರಿಯ ಕೋಟೇಶ್ವರ ರಥಶಿಲ್ಪಿ ಲಕ್ಷ್ಮೀ ನಾರಾಯಣ ಆಚಾರ್ಯ ಶುಭಹಾರೈಸಿದರು, ಪುರೋಹಿತ್ ರೋಹಿತಾಕ್ಷ ಆಚಾರ್ಯ, ಕುಂಭಾಸಿ ಅವರು ಶುಭಾಶಂಸನೆಗೈದರು
ಕಾರ್ಯಕ್ರಮದಲ್ಲಿ ಶ್ರೀ ವಿಶ್ವಕರ್ಮ ಸಮಾಜ ಯುವಕ ದಳ, ಕೋಟೇಶ್ವರ ಇದರ ಅಧ್ಯಕ್ಷ ಚಂದ್ರಯ್ಯ ಆಚಾರ್ಯ ತೆಕ್ಕಟ್ಟೆ, ಶ್ರೀ ವಿಶ್ವಕರ್ಮ ಸಮಾಜ ಯುವಕ ದಳ ಕೋಟೇಶ್ವರ ಇದರ ಗೌರವಾಧ್ಯಕ್ಷ ಸುರೇಶ ಆಚಾರ್ಯ, ಸಾಂತಾವರ, ಶ್ರೀ ದೇವಿ ಮಹಿಳಾ ಮಂಡಳಿ, ಕೋಟೇಶ್ವರ ಇದರ ಅಧ್ಯಕ್ಷೆ ಲಕ್ಷ್ಮೀ ಗೋಪಾಲ ಆಚಾರ್ಯ, ತೆಕ್ಕಟ್ಟೆ, ಶ್ರೀ ವಿಶ್ವಕರ್ಮ ಸಮಾಜ ಯುವಕ ದಳ, ಕೋಟೇಶ್ವರ ಇದರ ಕಾರ್ಯದರ್ಶಿ ಸತೀಶ್ ಆಚಾರ್ಯ, ಕುಂಬ್ರಿ ಮತ್ತಿತರರು ಉಪಸ್ಥಿತರಿದ್ದರು.
ಸತೀಶ್ ಅಚಾರ್ಯ ಸ್ವಾಗತಿಸಿ, ವಿನೇಂದ್ರ ಆಚಾರ್ಯ ಕುಂಭಾಶಿ ಸಹಕರಿಸಿ, ಗಣೇಶ್ ಆಚಾರ್ಯ ಕುಂಬ್ರಿ ನಿರೂಪಿಸಿ, ಯೋಗಿರಾಜ್ ಆಚಾರ್ಯ ಬೇಳೂರು ವಂದಿಸಿದರು. ಬಳಿಕ ಸಂಘದ ಸದಸ್ಯರು ಹಾಗೂ ಮಕ್ಕಳಿಂದ ವಿವಿಧ ವಿನೋದಾವಳಿಗಳು ಪ್ರದರ್ಶನಗೊಂಡಿತು.
ವಿಶ್ವಕರ್ಮರು ಸಾಂಪ್ರದಾಯಿಕ ಉದ್ಯೋಗಕ್ಕೆ ಆಧುನಿಕ ಸ್ಪರ್ಶವನ್ನು ನೀಡಬೇಕು. ವಿಶ್ವಕರ್ಮರು ಒಳ್ಳೆಯ ಸಾಧನೆಗಳನ್ನು ಮಾಡಬೇಕು, ಸಾಧನೆ ಮಾಡಲು ದೊಡ್ಡ ಹುದ್ದೆಗಳೇ ಇರಬೇಕಂತ ಇಲ್ಲ,ನಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿದರೆ ಜತೆಗೆ ಪ್ರಾಮಾಣಿಕವಾಗಿ ಒಳ್ಳೆಯ ಮನಸ್ಸಿನಿಂದ ಮಾಡಿದಾಗ ದೊಡ್ಡ ಸಾಧನೆ ಮಾಡಲು ಸಹಕಾರಿ. ಬದಲಾದ ಕಾಲಮಾನದಲ್ಲಿ ನಮ್ಮ ಸಂಸ್ಕಾರದಲ್ಲಿ ಬದಲಾವಣೆ ಕಾಣುತ್ತಿದ್ದೇವೆ. ವಿಶ್ವಕರ್ಮ ಸಮುದಾಯದವರು ಎಲ್ಲಾ ಕ್ಷೇತ್ರದಲ್ಲಿಯೂ ಕೂಡಾ ಪ್ರಗತಿಯನ್ನು ಹೊಂದುತ್ತಿದ್ದಾರೆ. ಪಂಚ ಕಸುಬುಗಳಿಗೂ ಕೂಡಾ ಗೌರವ ಮನ್ನಣೆಗಳು ಸಿಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಕರ್ಮ ಯೋಜನೆ ಎನ್ನುವಂತದು ಸಮಸ್ತ ವಿಶ್ವಕರ್ಮರಿಗೆ ರಾಷ್ಟ್ರ ಮಟ್ಟದಲ್ಲಿ ನೀಡಿದ ಗೌರವ. ಈ ನಿಟ್ಟಿನಲ್ಲಿ ನಾವು ಬಹಳ ಸಾಂಪ್ರದಾಯಿಕ ಉದ್ಯೋಗವನ್ನು ಮಾಡಿದರೆ ಈಗ ಉದ್ಯೋಗ ಮಾರುಕಟ್ಟೆಯಲ್ಲಿ ಲಾಭ ಗಳಿಸುವುದು ಕಷ್ಟವಿದೆ, ವಿಶ್ವಕರ್ಮರು ಸಾಂಪ್ರದಾಯಿಕ ಉದ್ಯೋಗಕ್ಕೆ ಆಧುನಿಕ ಸ್ಪರ್ಶವನ್ನು ನೀಡಬೇಕಾಗುತ್ತದೆ—-ಪ್ರೊ. ಕೆ. ರಾಮರಾಯ ಆಚಾರ್ಯ ಪ್ರಾಂಶುಪಾಲರು, ಕಾಳಾವರ ವರದರಾಜ ಎಂ. ಶೆಟ್ಟಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕೋಟೇಶ್ವರ“ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಹಾಗೂ ಆಚಾರ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ”—-ಕೋಟೇಶ್ವರ ರಥಶಿಲ್ಪಿ ರಾಜಗೋಪಾಲ ಆಚಾರ್ಯ