ಕೋಟೇಶ್ವರ ವಲಯ ಬ್ರಾಹ್ಮಣ ಪರಿಷತ್ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ
ಎಐ ತಂತ್ರಜ್ಞಾನ ಯುವ ಶಕ್ತಿಯ ಬಲಗುಂದಿಸುವ ಆತಂಕ ಮೂಡಿದೆ - ಪ್ರೊ. ಕೆ ವಿ ಕೆ ಐತಾಳ್

Views: 10
ಕನ್ನಡ ಕರಾವಳಿ ಸುದ್ದಿ: ಶಿಕ್ಷಣ ಕ್ಷೇತ್ರದಲ್ಲಿ ಇಂದು ತೀವ್ರ ಬದಲಾವಣೆಗಳಾಗುತ್ತಿವೆ. ಶಿಕ್ಷಣ ಒಂದು ಆಸ್ತಿ ಎಂಬ ತಿಳುವಳಿಕೆ ಎಲ್ಲರಿಗೂ ಮೂಡಿದೆ. ಆದರೆ, ಕೃತಕ ಬುದ್ಧಿಮತ್ತೆ ಬಳಕೆಯ ಸಾಧಕ – ಬಾಧಕಗಳ ಬಗ್ಗೆ ಇನ್ನಷ್ಟು ಅರಿವು ಮೂಡಬೇಕಾಗಿದೆ. ಅಪಾರ ಯುವಶಕ್ತಿಯನ್ನು ಹೊಂದಿರುವ ಭಾರತ ದೇಶದಲ್ಲಿ ಕೃತಕ ಬುದ್ಧಿ ಮತ್ತೆಯಿಂದಾಗಿ ಯುವಜನರು ನಿರುದ್ಯೋಗಿಗಳಾದರೆ, ದೇಶದ ಭವಿಷ್ಯ ಅಪಾಯಕಾರಿಯಾಗುತ್ತದೆ – ಎಂದು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಪ್ರೊಫೆಸರ್ ಕೆ. ವೆಂಕಟಕೃಷ್ಣ ಐತಾಳ್ ಹೇಳಿದರು.
ಕೋಟೇಶ್ವರ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ನೀಡಿದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
ದೇಶ – ವಿದೇಶಗಳಲ್ಲಿ ಎಲ್ಲಿ ಹೋದರೂ ಶಿಕ್ಷಕರಿಗೆ ಶಿಷ್ಯರು ಸಿಗುತ್ತಾರೆ. ತಮಗೆ ಪಾಠ ಹೇಳಿದ್ದ ಶಿಕ್ಷಕರನ್ನು ಗುರುತಿಸಿ ಗೌರವಿಸುವ ದೊಡ್ಡ ಗುಣ ಭಾರತೀಯರಿಗಿದೆ ಎಂದು ಶಿಕ್ಷಕರ ಕರ್ತವ್ಯದ ಬಗ್ಗೆ ಮಾತನಾಡಿದ ಅವರು, ತಮ್ಮ ಬಾಲ್ಯದ ದಿನಗಳು ಹಾಗೂ ಶಿಕ್ಷಕ ವೃತ್ತಿಯ ಆರಂಭಿಕ ದಿನಗಳನ್ನು ಸ್ಮರಿಸಿಕೊಂಡರು.
ಒಂಭತ್ತು ಮಂದಿ ಒಡ ಹುಟ್ಟಿದವರ ತುಂಬು ಕುಟುಂಬದಲ್ಲಿ ಬೆಳೆದ ತಮಗೆ ಬಾಲ್ಯದಲ್ಲಿ ಮನೆಯಲ್ಲಿ ಸಂಸ್ಕಾರ ಶಿಕ್ಷಣ ಚೆನ್ನಾಗಿಯೇ ಸಿಕ್ಕಿತ್ತು. 30 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದ ತಂದೆ, ಸದ್ಗೃಹಿಣಿ ತಾಯಿ ಮೊದಲ ಗುರುಗಳಾಗಿ ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಿದ್ದರು. ಪ್ರತಿದಿನವೂ ಸಂಜೆ ಮನೆಯಲ್ಲಿ ದೇವರ ಸ್ತೋತ್ರಗಳು, ವಾರ, ಸಂವತ್ಸರ, ತಿಥಿ, ನಕ್ಷತ್ರಗಳ ಹೆಸರು ಹೇಳದೇ ಊಟವಿಲ್ಲ. ಅನುಕೂಲಸ್ಥ ಕುಟುಂಬವಾದರೂ ಮಕ್ಕಳಿಗೆ ವರ್ಷದಲ್ಲಿ ಕೊಡಿಹಬ್ಬ ಮತ್ತು ಬೇಸಿಗೆಯಲ್ಲಿ ಎರಡೇ ಜೊತೆ ಬಟ್ಟೆ. ಆಟಕೆರೆ ಮಳಿಗೆಯಲ್ಲಿ ಎಲ್ಲರಿಗೂ ಒಂದೇ ನಮೂನೆಯ ಬಟ್ಟೆ ಹೊಲಿಸಿದರೆ ಮುಗಿಯಿತು. ತಂದೆ ಮುಖ್ಯೋಪಾಧ್ಯಾಯರಾದ್ದರಿಂದ ಶಾಲಾ ಇನ್ಸ್ಪೆಕ್ಟರ್ ಬರುವ ದಿನ ಮನೆಯಲ್ಲಿ ಬಟಾಟೆ – ನೀರುಳ್ಳಿ ಹುಳಿ, ಸಾಬಕ್ಕಿ ಪಾಯಸದ ಔತಣವಿರುತ್ತಿತ್ತು ಎಂದು ಬಾಲ್ಯದ ದಿನಗಳನ್ನು ಸ್ಮರಿಸಿಕೊಂಡರು.
ತಮ್ಮ ಪ್ರಾಥಮಿಕ ಶಾಲಾ ದಿನಗಳ ಬಗ್ಗೆ ಮೆಲುಕು ಹಾಕಿದ ವೆಂಕಟಕೃಷ್ಣ ಐತಾಳರು, ಕಾತ್ಯಾಯಿನಿ ಟೀಚರ್, ಮಚ್ಚು ಟೀಚರ್, ಮಡಿವಾಳ ಟೀಚರ್, ಸಂಕಯ್ಯ ಶೆಟ್ಟಿ, ಜೂಲಿಯಾನ ಫೆರ್ನಾಂಡಿಸ್ ಎಂದು ತಮಗೆ ಪಾಠ ಮಾಡಿದ್ದ ಗುರುಗಳ ಹೆಸರನ್ನು ಹೇಳಿದಾಗ ಸಭಿಕರು 80 ರ ಹರೆಯದ ಅವರ ಸ್ಮರಣ ಶಕ್ತಿಗೆ ಬೆರಗಾದರು. “ವಾವ್ಹಾರೆ ಮೆಣಸಿನ ಕಾಯಿ.. ಒಣ ರೊಟ್ಟಿಗೆ ತಂದಳು ತಾಯಿ.. ಅದು ಬೆಳೆಯುವ ಮೊದಲು ಹಸಿರಾಗಿ.. ಬೆಳೆದ ಮೇಲೆ ಕೆಂಪಾಗಿ….” ಎಂಬ ಬಾಲ್ಯದಲ್ಲಿ ಕಲಿತ ಹಾಡು ಹೇಳಿದಾಗ ಸಭೆ ಅದ್ಭುತ ಕರತಾಡನ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿತು.
ನಂತರ ಹೈಸ್ಕೂಲ್ ದಿನಗಳಲ್ಲಿ ಸುಬ್ರಹ್ಮಣ್ಯ ಮಂಜ, ಪಿ ಎಸ್ ಕಾರಂತ ಮೊದಲಾದ ಶಿಸ್ತಿನ ಸಿಪಾಯಿಗಳಂತಿದ್ದ ಗುರುಗಳಿಂದ ತಮ್ಮ ಜೀವನ ರೂಪುಗೊಂಡಿತು. ನಂತರ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಶಿಕ್ಷಣ, ಅಲ್ಲಿನ ಪ್ರಾಂಶುಪಾಲ ಡಾ. ಎ ಪಿ ಮಿನೆಜಸ್, ಡಾ. ಕಮಲಾಕ್ಷ, ಡಾ. ಶ್ರೀನಿವಾಸ ಪೈ, ಮುಂದೆ ಮೈಸೂರು ಯೂನಿವರ್ಸಿಟಿಯಲ್ಲಿ ಅಧ್ಯಯನ ಮಾಡುವಾಗ ಡಾ. ಸಿದ್ದಲಿಂಗಯ್ಯ, ಡಾ.ಸಂಕೇ ಗೌಡ, ಡಾ. ಆಂಜನೇಯುಲು, ಡಾ. ಅಂಜಲ್ ಮೂರ್ತಿ ಮೊದಲಾದ ಘನವೆತ್ತ ಪ್ರಾಧ್ಯಾಪಕರ ಪಾಠ ಕೇಳುವ ಅವಕಾಶ ಒದಗಿತ್ತು.
ನಂತರ ಕುಂದಾಪುರ ಬೋರ್ಡ್ ಹೈಸ್ಕೂಲ್ ನಲ್ಲಿ ಅಧ್ಯಾಪನ ವೃತ್ತಿ ಶುರು. ಆಮೇಲೆ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ದೊಡ್ಡ ಹುದ್ದೆ. ನಿರಂತರ 40 ವರ್ಷಗಳ ಅಧ್ಯಾಪನ ವೃತ್ತಿ. ಅಸಂಖ್ಯ ಶಿಷ್ಯ ಬಳಗ… ಹೀಗೆ 80 ರ ಯುವಕ ಕೆ ವಿ ಕೆ ಐತಾಳರು ತಮ್ಮ ಗತ ಜೀವನವನ್ನು ಮೆಲುಕು ಹಾಕುತ್ತಿದ್ದರೆ, ನೆರೆದ ಸಭಿಕರು ಮೈಯೆಲ್ಲಾ ಕಿವಿಯಾಗಿ ಕೇಳಿಸಿಕೊಂಡರು.
ಐತಾಳರ ಸಹೋದ್ಯೋಗಿ, ವಿಪ್ರವಾಣಿ ಪ್ರಧಾನ ಸಂಪಾದಕ ಪ್ರೊ. ಶಂಕರ ರಾವ್ ಕಾಳಾವರ, ವಲಯಾಧ್ಯಕ್ಷ ಬಿ. ವಾದಿರಾಜ ಹೆಬ್ಬಾರ್ ಇನ್ನಿತರ ಗಣ್ಯರ ಸಮಕ್ಷಮದಲ್ಲಿ ಪ್ರೊ. ವೆಂಕಟಕೃಷ್ಣ ಐತಾಳರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೋಟಿ ಸಾಫ್ಟ್ ಸೊಲ್ಯೂಷನ್ ಸಂಸ್ಥೆ ಮತ್ತು ಮಿತ್ರದಳ ಕೋಟೇಶ್ವರ ವಲಯದವರು ಪ್ರೊ. ಐತಾಳರನ್ನು ಗೌರವಿಸಿದರು. ಪ್ರೊ. ಶಂಕರ ರಾವ್ ಕಾಳಾವರ ಮಾತನಾಡಿ, ಐತಾಳರೊಂದಿಗೆ ಕೆಲಸ ನಿರ್ವಹಿಸಿದ ಕಾಲೇಜು ದಿನಗಳನ್ನು, ತಮ್ಮಿಬ್ಬರ ಒಡನಾಟವನ್ನು ಸ್ಮರಿಸಿ, ಗುರು ನಮನ ಸಲ್ಲಿಸಿದರು.
ವಲಯಾಧ್ಯಕ್ಷ ಬಿ. ವಾದಿರಾಜ ಹೆಬ್ಬಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವೇದಿಕೆ ಅಧ್ಯಕ್ಷೆ ವಾಣಿಶ್ರೀ ಹೆಬ್ಬಾರ್ ಶುಭಾಶಂಸನೆಗೈದರು.
ಮಹಿಳಾ ವೇದಿಕೆ ಕಾರ್ಯದರ್ಶಿ ನಾಗರತ್ನ ಉಡುಪ ಪ್ರಾರ್ಥಿಸಿದರು. ವಲಯ ಕಾರ್ಯದರ್ಶಿ ನಾಗೇಂದ್ರ ಬಿಳಿಯ ಸ್ವಾಗತಿಸಿದರು. ಅರ್ಚಕ ವೈ. ಎನ್. ವೆಂಕಟೇಶಮೂರ್ತಿ ಭಟ್ ಸನ್ಮಾನ ಪತ್ರ ವಾಚಿಸಿದರು. ಜಿಲ್ಲಾ ಬ್ರಾಹ್ಮಣ ಪರಿಷತ್ ನ ಗಣೇಶ್ ರಾವ್, ಶಾಂತಾ ಗಣೇಶ್, ವಲಯದ ಪೂರ್ವಾಧ್ಯಕ್ಷರು, ಐತಾಳರ ಪುತ್ರ, ಬ್ರಹ್ಮಾವರ ತಾಲೂಕು ವೈದ್ಯಾಧಿಕಾರಿ ಡಾ. ಮಹೇಶ್ ಐತಾಳ್ ದಂಪತಿ, ಮೊಮ್ಮಗ ಅಭಿರಾಮ್, ಕೋಟಿ ಸಾಫ್ಟ್ ಸೊಲ್ಯೂಶನ್ ಸಂಸ್ಥೆಯ ಚಿದಂಬರ ಉಡುಪ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಕೆ. ಜಿ. ವೈದ್ಯ ಕಾರ್ಯಕ್ರಮ ನಿರೂಪಿಸಿ, ಗೌರವಾಧ್ಯಕ್ಷ ಗಣಪಯ್ಯ ಚಡಗ ವಂದಿಸಿದರು.