ಕೊಲ್ಲೂರು ಮೂಕಾಂಬಿಕೆಗೆ 4 ಕೋಟಿ ಮೌಲ್ಯದ ವಜ್ರಖಚಿತ ಕಿರೀಟ ಅರ್ಪಿಸಿದ ಇಳಯರಾಜ

Views: 147
ಕನ್ನಡ ಕರಾವಳಿ ಸುದ್ದಿ: ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ವಜ್ರಖಚಿತ ಕಿರೀಟ ಅರ್ಪಿಸಿದರು.
ಇದಕ್ಕೂ ಮುನ್ನ ಪಂಚವಾದ್ಯಗಳೊಂದಿಗೆ ಓಲಗ ಮಂಟಪದಿಂದ ರಥಬೀದಿಯಲ್ಲಿ ಪೂರ್ಣಕುಂಭ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಕಿರೀಟ, ಚಿನ್ನಾಭರಣವನ್ನು ತರಲಾಯಿತು. ಕ್ಷೇತ್ರದ ಅರ್ಚಕರು ಪೂಜಾ ವಿಧಿವಿಧಾನ ಪೂರೈಸಿದ ಬಳಿಕ ದೇವರಿಗೆ ಕಿರೀಟ, ಆಭರಣಗಳನ್ನು ಒಪ್ಪಿಸಿದರು. ದೇವಸ್ಥಾನದ ವತಿಯಿಂದ ಇಳಯರಾಜ ಅವರನ್ನು ಗೌರವಿಸಲಾಯಿತು.
ಇಳಯರಾಜ ಅವರ ಪುತ್ರ ಕಾರ್ತಿಕ್ ಇಳಯರಾಜ, ಮೊಮ್ಮಗ ಯತೀಶ್ ಇಳಯರಾಜ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಕಾರ್ಯನಿರ್ವಹಣಾ ಅಧಿಕಾರಿ ಪ್ರಶಾಂತ್ ಶೆಟ್ಟಿ, ಸಹಾಯ ಕಾರ್ಯನಿರ್ವಹಣಾ ಅಧಿಕಾರಿ ತುಂಬಗಿ, ಅರ್ಚಕರಾದ ಶ್ರೀಧರ ಅಡಿಗ, ಕೆ.ಎನ್.ಗೋವಿಂದ ಅಡಿಗ, ವಿಘ್ನೇಶ್ವರ ಅಡಿಗ, ಎನ್.ಸುಬ್ರಮಣ್ಯ ಅಡಿಗ, ಸುರೇಶ್ ಭಟ್, ಶಿವರಾಮ ಅಡಿಗ, ನರಸಿಂಹ ಭಟ್, ಸುದರ್ಶನ್ ಜೋಯಿಸ್, ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ದೇವಿಗೆ ಆಭರಣಗಳನ್ನು ಅರ್ಪಿಸಿದ ಬಳಿಕ ಮಾತನಾಡಿದ ಅವರು, “ಇದರಲ್ಲಿ ನನ್ನದೇನೂ ಇಲ್ಲ. ಎಲ್ಲವೂ ಆ ಜಗನ್ಮಾತೆ ಮೂಕಾಂಬಿಕೆಯ ಅನುಗ್ರಹ ಮತ್ತು ಆಶೀರ್ವಾದ” ಎಂದು ಹೇಳಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಮಾತನಾಡಿ, ಇಳಯರಾಜ ಅವರು ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಆಗಾಗ ಬರುತ್ತಾರೆ. ಬರುವಾಗ ಅವರು ಯಾರಿಗೂ ಹೇಳುವುದಿಲ್ಲ. ಮಾಮೂಲಿ ಭಕ್ತರಂತೆ ಆಗಮಿಸುತ್ತಾರೆ. ಈ ಬಾರಿ ನೀಡಿದ ವಜ್ರದ ಕಿರೀಟ ಮತ್ತು ಇತರ ವಸ್ತುಗಳನ್ನು ನೀಡಿದ್ದು ಅವುಗಳ ಬೆಲೆ ನಾಲ್ಕು ಕೋಟಿ ರೂ.ಗೂ ಹೆಚ್ಚು. 2006ರಲ್ಲೂ ಕೂಡ ದೇವಿಗೆ ವಜ್ರದ ಕಿರೀಟ ನೀಡಿದ್ದರು. ಖ್ಯಾತ ಸಂಗೀತ ನಿರ್ದೇಶಕರು ಮತ್ತು ಗಾಯಕರೂ ಆದ ಇಳಯರಾಜ ಅವರು ಮೂಕಾಂಬಿಕಾ ದೇವಿಯ ಭಕ್ತರು ಎಂಬುದೇ ಖುಷಿಯ ವಿಚಾರ ಎಂದರು.






