ಧಾರ್ಮಿಕ

ಕೊಲ್ಲೂರು ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ನೂರಾರು ಮಕ್ಕಳಿಗೆ ಅಕ್ಷರಭ್ಯಾಸ

Views: 47

ಕನ್ನಡ ಕರಾವಳಿ ಸುದ್ದಿ: ನಾಡಿನೆಲ್ಲೆಡೆ ವಿಜಯದಶಮಿ ಸಂಭ್ರಮ ಜೋರಾಗಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ವಿಜಯದಶಮಿ ಅಥವಾ ವಿದ್ಯಾದಶಮಿ ಎಂದು ಕರೆಯಲಾಗುವ ಹಬ್ಬವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲಾಯಿತು.

ದಕ್ಷಿಣ ಭಾರತದ ಹೆಸರಾಂತ ದೇವಾಲಯಗಳಲ್ಲೊಂದಾದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯುವ ವಿಜಯದಶಮಿ ಉತ್ಸವಕ್ಕೆ ವಿಶೇಷ ಮಹತ್ವವಿದೆ. ನವರಾತ್ರಿ ಕೊನೆಯ ದಿನವಾದ ವಿಜಯದಶಮಿಯಂದು ರಥೋತ್ಸವ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿದೆ. ವಿಜಯದಶಮಿಯಂದು ದೇವಿಯನ್ನು ರಥದಲ್ಲಿ ಕೂರಿಸಿ ದೇವಸ್ಥಾನದ ಆವರಣದಲ್ಲಿ ಮೆರವಣಿಗೆ ನಡೆಸಲಾಯಿತು. ಪುಷ್ಪರಥೋತ್ಸವ ಎಂದು ಕರೆಯಲ್ಪಡುವ ಈ ರಥೋತ್ಸವದಲ್ಲಿ ನೂರಾರು ಭಕ್ತರು ಭಾಗಿಯಾದರು.

ವಿಜಯದಶಮಿ ಶ್ರೇಷ್ಠವಾದ ದಿನ. ಈ ದಿವಸ ಯಾವುದೇ ಶುಭ ಕಾರ್ಯಗಳನ್ನು ಕೈಗೊಂಡರೆ ನಿರ್ವಿಘ್ನವಾಗಿ ನಡೆಯುತ್ತವೆ ಎಂಬುದು ಪ್ರತೀತಿ. ಈ ಶುಭದಿನದಂದು ಕೊಲ್ಲೂರು ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ಮಕ್ಕಳಿಗೆ ಮೊದಲ ಅಕ್ಷರಭ್ಯಾಸ ಮಾಡಿಸುವ ಸಂಪ್ರದಾಯ ಇದೆ. ಮಕ್ಕಳು ಶಾಲೆಗೆ ಸೇರುವ ಮುನ್ನ ಇಲ್ಲಿ ದೇವಿಯ ಸನ್ನಿಧಿಯಲ್ಲಿ ಮೊದಲ ಅಕ್ಷರ ಅಭ್ಯಾಸ ಮಾಡಿಸಲಾಗುತ್ತದೆ. ಅಕ್ಕಿ ಕಾಳಿನಲ್ಲಿ ಮಕ್ಕಳ ಕೈಯಿಂದ ಮೊದಲ ಅಕ್ಷರವನ್ನು ಬರೆಸಲಾಗುತ್ತದೆ.

ಓಂ ಸ್ವಸ್ತಿಕ್ ಹೀಗೆ ಕನ್ನಡ ಮತ್ತು ಇಂಗ್ಲಿಷ್ ನ ಮೊದಲ ಅಕ್ಷರಗಳನ್ನು ಪುಟ್ಟ ಮಕ್ಕಳ ಕೈಯಲ್ಲಿ ಬರೆಸಲಾಗುತ್ತದೆ. ಬೆಳಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ಬ್ರಾಹ್ಮಿ ಮುಹೂರ್ತದಲ್ಲಿ ಅಕ್ಷರಅಭ್ಯಾಸ ಪ್ರಾರಂಭವಾಯಿತು. ಕೇರಳ ಕರ್ನಾಟಕ ಸಹಿತ ಹಲವು ಭಾಗಗಳ ಸಾಕಷ್ಟು ಚಿಣ್ಣರು ಮೊದಲ ಅಕ್ಷರಭ್ಯಾಸದಲ್ಲಿ ಭಾಗಿಯಾದರು.

ಕೈಯಲ್ಲಿ ಬರೆದ ಬಳಿಕ ಪೋಷಕರು ಉಂಗುರದ ಮೂಲಕ ಮಕ್ಕಳ ನಾಲಿಗೆಯ ಮೇಲೆ ಓಂಕಾರ ಬರೆದರು. ಕೊಲ್ಲೂರು ಮುಕಾಂಬಿಕಾ ಸನ್ನಿಧಿ ಬಹಳ ಪವಿತ್ರ ಮತ್ತು ಶಕ್ತಿ ಪೀಠವಾಗಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಿ ಲಕ್ಷ್ಮೀ, ಸರಸ್ವತಿ ಮತ್ತು ಪಾರ್ವತಿಯ ಸಂಗಮ ಸ್ಥಳವಾಗಿದೆ. ಇಲ್ಲಿ ಅಕ್ಷರಭ್ಯಾಸ ಮಾಡಿಸಿದರೆ ಮಕ್ಕಳು ವಿದ್ಯಾವಂತರಾಗಿ ಹೊರಹೊಮ್ಮುತ್ತಾರೆ ಎಂಬ ಕಾರಣಕ್ಕೆ ಸಾಕಷ್ಟು ಪೋಷಕರು ಮಕ್ಕಳನ್ನು ಕರೆತಂದಿದ್ದರು.

 

Related Articles

Back to top button