ಕುಂದಾಪುರ ವಾರ್ಷಿಕ ಕೋಟಿಗೂ ಹೆಚ್ಚು ಕೃಷಿ ವಹಿವಾಟು ‘ಬಿಲಿಯನೇರ್ ರೈತ ಪ್ರಶಸ್ತಿ’ಗೆ ರಮೇಶ್ ನಾಯಕ್ ಆಯ್ಕೆ
Views: 21
ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಕೆದೂರು ಗ್ರಾಮದ ಉದ್ಯಮಿ ರಮೇಶ್ ನಾಯಕ್ ಕೇಂದ್ರ ಸರ್ಕಾರ ನೀಡುವ ಬಿಲಿಯನೇರ್ ರೈತ ಪ್ರಶಸ್ತಿಗೆ ಉಡುಪಿ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ರೈಸ್‌ಮಿಲ್ ಉದ್ಯಮದ ಜೊತೆಗೆ ಕೃಷಿ ಮೌಲ್ಯವರ್ಧನೆ ಹಾಗೂ ಗ್ರಾಮೀಣ ರೈತರಿಗೆ ಬೆನ್ನೆಲುಬಾಗಿ ನಿಂತಿರುವ ರಮೇಶ್ ನಾಯಕ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಮೇಶ್ ನಾಯಕ್ ಅವರು ಕುಂದಾಪುರ ತಾಲೂಕಿನ ಕೆದೂರು ಗ್ರಾಮದಲ್ಲಿ ತಮ್ಮ ಸುಮಾರು 13 ಎಕರೆ ಜಾಗದಲ್ಲಿ ಸುಮಾರು 11 ಜಾತಿಯ, 1,634 ವಿವಿಧ ತಳಿಯ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಈ ಮಿಶ್ರ ಕೃಷಿಯಲ್ಲಿ ಉತ್ತಮ ಫಸಲು ಕಂಡುಕೊಳ್ಳುವ ಮೂಲಕ ರಮೇಶ್ ನಾಯಕ್ ಯಶಸ್ವಿ ರೈತ ಆಗಿ ಹೊರಹೊಮ್ಮಿದ್ದಾರೆ.
ಉದ್ಯಮದ ಜೊತೆ ಕೃಷಿಯಲ್ಲಿ ಸಾಧನೆ ಗೈದಿರುವ ಉದ್ಯಮಿ ರಮೇಶ್ ನಾಯಕ್ ವಾರ್ಷಿಕ ಸುಮಾರು ಕೋಟಿ ರೂಗಳಿಗೂ ಅಧಿಕ ವಹಿವಾಟು ಮಾಡಿರುವ ಹಿನ್ನೆಲೆಯಲ್ಲಿ ಬಿಲಿಯನೇರ್ ರೈತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 7ರಂದು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ರಮೇಶ್ ನಾಯಕ್ ಅವರು ತೋಟಗಾರಿಕಾ ಕೃಷಿ ಜೊತೆಗೆ ಹೈನುಗಾರಿಕೆ ಸಹ ನಡೆಸುತ್ತಿದ್ದಾರೆ. ಇನ್ನು ತಮ್ಮ ಜಾಗದಲ್ಲಿ ತೆಗೆದ ಇಂಗು ಗುಂಡಿಯ ಮಣ್ಣನ್ನು ಬಳಿಸಿ 30 ಸಾವಿರಕ್ಕೂ ಅಧಿಕ ಅನಾನಸ್ ಗಿಡಗಳನ್ನು ಬೆಳೆಯುತ್ತಿದ್ದಾರೆ. ಜೊತೆಗೆ ಸಾವಿರಾರು ಪಪ್ಪಾಯಿ ಗಿಡಗಳನ್ನು ಸಹ ಬೆಳೆದಿದ್ದಾರೆ.ಸೂರ್ಯ, ಪ್ರಕಾಶ್ಚಂದ್ರ, ವಿಯೆಟ್ನಾಂ ಸೂಪರ್ ಅರ್ಲಿ, ಸಿಂಗಾಪುರ, ಅತ್ತಾವರ ಜಾತಿಯ ಸುಮಾರು 285 ಹಲಸು ಹಾಗೂ 500 ಡ್ರಾಗನ್ ಫೂಟ್ ಸೇರಿದಂತೆ ಒಟ್ಟು 1,634 ವಿವಿಧ ಜಾತಿಯ ಹಣ್ಣಿನ ಗಿಡಗಳು ಇವರ ತೋಟದಲ್ಲಿ ಕಾಣಬಹುದಾಗಿದೆ.