ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ವಾರಾಹಿ ಕಾಲುವೆ ಮುಖಾಂತರ ನೀರು ಹರಿಸುವಂತೆ ಒತ್ತಾಯ…ಮಂದಗತಿಯ ಕಾಮಗಾರಿಗೆ ಗ್ರಾಮಸ್ಥರ ಆಕ್ರೋಶ..!
Views: 85
ಕುಂದಾಪುರ: ಅಸೋಡು ರೈಲ್ವೆ ಟ್ರ್ಯಾಕ್ ನಿಂದ ವಕ್ವಾಡಿ ಮಾರ್ಗದಲ್ಲಿ ವಾರಾಹಿ ಕಾಲುವೆ ಕಾಮಗಾರಿ ಮುಗಿದು ಒಂದು ವರ್ಷ ಕಳೆದರೂ ನೀರು ಹರಿಸದೇ ಇರುವುದರಿಂದ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಉಳಿದ ಕಾಮಗಾರಿಯನ್ನು ಮುಗಿಸಿ ನೀರು ಹರಿಸುವಂತೆ ಒತ್ತಾಯಿಸಲಾಗಿದೆ.
ಇತ್ತೀಚೆಗೆ ಕಾಳಾವರ ಗ್ರಾಮ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ಕಾಲುವೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು. ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದ ಸಮಿತಿಯವರು ಬೇಸರ ವ್ಯಕ್ತಪಡಿಸಿದರು.
ಈ ಬಾರಿ ಮಳೆ ಪ್ರಮಾಣ ತೀವ್ರ ಕಡಿಮೆಯಾಗಿದ್ದು ಈ ಪರಿಸರದಲ್ಲಿ ನೀರಿನ ಅಭಾವ ಮತ್ತು ಅಂತರ್ಜಲ ಮಟ್ಟ ಕುಸಿದಿದೆ. ಮಾರ್ಚ್ ಏಪ್ರಿಲ್ ನಲ್ಲಿ ನೀರಿನ ಅಭಾವ ಎದುರಾಗಲಿದ್ದು ನೀರಿಗಾಗಿ ಪರದಾಡುವ ಭೀತಿ ಎದುರಾಗಿದೆ. ಈ ಯೋಜನೆ ಮೂಲಕ ನಾಲ್ಕಾರು ಗ್ರಾಮದ ವ್ಯಾಪ್ತಿಯವರು ನೀರಿಗಾಗಿ ಆಶ್ರಯಿಸಿದ್ದಾರೆ ಕೂಡಲೇ ಉಳಿದ ಕಾಮಗಾರಿಕೆ ಮುಗಿಸಿ ಆದಷ್ಟು ಬೇಗ ವಾರಾಹಿ ಕಾಲುವೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಅಭಿಯಂತರರು ಹಾಗೂ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿಕೊಳ್ಳಲಾಗಿದೆ.