ಧಾರ್ಮಿಕ

ಕರಾವಳಿಯಲ್ಲಿ ಸಂಭ್ರಮದ ನಾಗರ ಪಂಚಮಿ ಆಚರಣೆ 

Views: 34

ಉಡುಪಿ: ಶ್ರಾವಣ ಮಾಸದಲ್ಲಿ ಮೊದಲು ಬರುವ ಹಬ್ಬ, ಭಯ, ಭಕ್ತಿ, ಶ್ರದ್ಧೆಯಿಂದ ಆಚರಿಸುವ ಹಬ್ಬ ನಾಗರ ಪಂಚಮಿ. ಪ್ರತಿಯೊಬ್ಬರು ನಿತ್ಯ ಕರ್ಮಗಳನ್ನು ಮುಗಿಸಿ ಕುಟುಂಬದವರು ತಲ ತಲಾಂತರದಿಂದ ನಂಬಿಕೊಂಡು ಬಂದಿರುವ ನಾಗಬನದಲ್ಲಿ ಶ್ರೀ ನಾಗದೇವರಿಗೆ ತನು ಹಾಕಿಸುವುದು ವಾಡಿಕೆ

ನಾಗರಾಧನೆ ಕೇವಲ ಕೆಲ ಪೂಜೆಯಲ್ಲ ಪ್ರಕೃತಿಯ ಆರಾಧನೆಯಾಗಿದೆ. ನಿಸರ್ಗ ಪ್ರೀತಿಯನ್ನು ಜಾಗೃತಗೊಳಿಸುವ ಪರ್ವವಾಗಿದೆ. ಕುಟುಂಬ ಸಂಬಂಧವನ್ನು ಗಟ್ಟಿಗೊಳಿಸುವ ಹಬ್ಬವಾಗಿದೆ.

ಕರಾವಳಿಯ ಜನ ಜೀವನದಲ್ಲಿ ಹಾಸುಹೊಕ್ಕಾದ ಒಂದು ಆಚರಣೆಯಾಗಿದೆ. ಕಾಲದ ಆಳಕ್ಕಿಳಿದು ನೋಡಿದರೆ ನಾಗರಾಜ ಪ್ರಪಂಚದ ಬಹುತೇಕ ಸಂಸ್ಕೃತಿಗಳಲ್ಲಿ ಪೂಜಾರ್ಹ ದೇವನಾಗಿದ್ದಾನೆ.

ಮಳೆ ಬೆಳೆ ಫಲವತ್ತತೆ ಸೂಚಕನಾಗಿಯೂ ರೋಗ ಶಮನಕಾರಕನಾಗಿಯು ಸಂತಾನವೃದ್ಧಿ ಪೋಷಕನಾಗಿ ಇದ್ದಾನೆ.

ಕಷ್ಟಕಾರ್ಪಣ್ಯಗಳು ಬಂದಾಗ ನಾಗಪೂಜೆ ಮಾಡಿ ನಾಗದರ್ಶನ ಮಾಡಿಸಿ ಪರಿಹಾರ ಪಡೆಯುತ್ತಾರೆ ನಾಗನಿಗೆ ಕೊನೆಯ ಪಕ್ಷ ವರ್ಷಕ್ಕೊಮ್ಮೆಯಾದರೂ ನಾಗರಪಂಚಮಿಯಂದು  ನಾಗನಿಗೆ ತನು ಪೂಜೆ ಮಾಡಿಸಿ ಜನರು ನಾಗನ ಮೇಲೆ ಇಟ್ಟಿರುವ ನಂಬಿಕೆ ನಡವಳಿಕೆ ಮಹತ್ವ ಪಡೆದಿದೆ.

ನಾಗದೇವರಿಗೆ ಪ್ರಿಯವಾದ ಲವಂಚ, ಸಿಂಗಾರ ಹೂವು, ಅಕ್ಕಿ, ಕಾಯಿ, ಬಾಳೆಹಣ್ಣು ತಂಬಿಟ್ಟು (ಅಕ್ಕಿ ಬೆಲ್ಲದಿಂದ ಅರ್ಚಕರು ತಯಾರಿಸಿತ್ತಾರೆ) ಅರಳು ಬೆಲ್ಲ ವಿವಿಧ ಹೂವುಗಳು, ನಾಗದೇವರಿಗೆ ಪ್ರಿಯವಾದ ಕೇದಿಗೆಹೂವು, ಸೀಯಾಳ (ಎಳನೀರು) ಹಾಲು ಅಭಿಷೇಕವನ್ನು ತಂದಿರಿಸಿಅರ್ಚಕರು ವಿಧಿ ವಿಧಾನಗಳಿಂದ ನಾಗದೇವರಿಗೆ ಪೂಜಿಸುತ್ತಾರೆ.

ಇಡೀ ಭೂಮಂಡಲವನ್ನೇ ಹೊತ್ತು ನಮ್ಮನ್ನು ರಕ್ಷಿಸಿ ಮಾನವರ ಸರಿ ತಪ್ಪುಗಳ ಬಗ್ಗೆ ಆಗಾಗ್ಗೆ ಪ್ರತ್ಯಕ್ಷವಾಗಿ ಎಚ್ಚರಿಸುತ್ತಾ ಸರಿದಾರಿಯಲ್ಲಿ ನಡೆಯಲು ಪ್ರೇರಣೆ ನೀಡುವ ಕಲಿಯುಗದವರಿಗೆ ಪ್ರತ್ಯಕ್ಷ ಕಣ್ಣಿಗೆ ಕಾಣುವ ನಾಗದೇವರನ್ನು ಶ್ರದ್ಧಾಭಕ್ತಿಯಿಂದ ಪೂಜಾ ಕೈಂಕರ್ಯ ನಡೆಸಿ, ನಾಗಾರಾಧನೆಯಿಂದ ರೋಗ-ರುಜಿನಾಧಿಗಳು ಮತ್ತು ವಿವಾಹ ಸಂಬಂಧಿ ಸಮಸ್ಯೆಗಳು ದೂರಾಗುತ್ತದೆ ಎಂಬ ನಂಬಿಕೆಯಿದೆ.

ನಾಗದೇವರಿಗೆ ವರ್ಷಕ್ಕೊಮ್ಮೆ ನಾಗನ ಕಲಶ ಮಾಡಿಸಿ (ಶುದ್ದ ಕಲಶ) ಹಾಕಿಸಿದಾಗ ಆಯುರಾರೋಗ್ಯ ಭಾಗ್ಯ ತೇಜಸ್ಸು ಸಂಪತ್ತು ನೆಮ್ಮದಿ ಸುಖ- ಸಂತೋಷ ಶ್ರೀ ನಾಗದೇವರ ಅನುಗ್ರಹದಿಂದ ಪಡೆಯಬಹುದಾಗಿದೆ.

ಪರಶುರಾಮ ದೇವರು ಸಮುದ್ರ ರಾಜನಿಂದ ತುಳುನಾಡನ್ನು ಪಡೆದುಕೊಂಡಾಗ ಅದು ಉಪಯೋಗಕ್ಕೆ ಬಾರದ ಬರಡು ಭೂಮಿಯಾಗಿತ್ತು. ಉಪ್ಪಿನ ಕೋಟೆಯಂತೆ ಇದ್ದ ಭೂಮಿಯನ್ನು ಸಮೃದ್ಧ ಭೂಮಿಯನ್ನಾಗಿಸಿ ಕೊಡಲು ಪರಶುರಾಮ ನಾಗ ರಾಜನನ್ನು ಬೇಡಿಕೊಳ್ಳುತ್ತಾನೆ.

ಪರಶುರಾಮನ ಮೊರೆಯನ್ನು ಕೇಳಿದ ನಾಗಗಳು ತಮ್ಮ ದೇಹವನ್ನು ಪಣಕ್ಕೆ ಇಟ್ಟು ಉಪ್ಪಿನ ಕೋಟೆಯನ್ನು ಮೆಟ್ಟಿ ಪಾತಾಳದಿಂದ ಸಿಹಿನೀರು ತರುತ್ತವೆ. ಅಡಿಯಲ್ಲಿದ್ದ ಮೆಕ್ಕಲು ಮಣ್ಣನ್ನು ಬುಡಮೇಲು ಮಾಡುತ್ತವೆ. ತುಳುನಾಡನ್ನು ಕಟ್ಟುವ ಕಾಯಕವನ್ನು ತಪಸ್ಸಾಗಿ ಸ್ವೀಕರಿಸಿದ ನಾಗಗಳು ಉಪ್ಪಿನ ಮೇಲೆ ಹರಿದಾಡಿದಾಗ ದೇಹಕ್ಕೆ ಗಾಯವಾಗುತ್ತದೆ.

ಹೀಗೆ ಗಾಯವಾದ ಹಾವುಗಳಿಗೆ ತುಳುವರು ಉರಿಯ ಉಪಶಮನಕ್ಕೆ ಗೆಂದಾಲಿ ಎಲೆನೀರಲ್ಲಿ ಅಭಿಷೇಕ ಮಾಡುತ್ತಾರೆ. ಗಾಯಕ್ಕೆ ಅರಿಶಿನ ಹಚ್ಚಿ, ತಿಲಕವಿಟ್ಟು ಭಕ್ತಿಯಿಂದ ಆರತಿ ಮಾಡುತ್ತಾರೆ. ನಾಗನನ್ನು ತಮ್ಮ ಕುಲದೇವರಾಗಿ ಸ್ವೀಕರಿಸುತ್ತಾರೆ.

ನಾಗಬನಗಳು ಪ್ರಕೃತಿ ಮಾತೆಯ ಮಡಿಲಲ್ಲಿ ಇರಬೇಕು. ನಾಗಬನ ಮರದ ಬುಡದಲ್ಲೇ ಇರಬೇಕು. ಗಿಡಮರ ಕಡಿದು ನಾಗಬನ ಕಾಂಕ್ರಿಟ್ ನಿಂದ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಇದರಿಂದ ನಿಜ ನಾಗರಗಳಿಗೆ ವಾಸಿಸಲು ನೆಲೆ ಇಲ್ಲದಂತಾಗಿ ಮನುಷ್ಯ ವಾಸಿಸುವ ಮನೆಗಳಿಗೆ ಪ್ರವೇಶ ಮಾಡುತ್ತಿವೆ.

ಇದರಿಂದ ಹಾವುಗಳು ಮಾನವನ ಕೈಗೆ ಸಿಕ್ಕು ಸಮಸ್ಯೆ ಅನುಭವಿಸುವಂತಾಗಿದೆ. ಅಲ್ಲದೇ, ಮನುಷ್ಯ ಮನೆಗಳಿಗೆ ಬರುವ ಹಾವುಗಳನ್ನು ಓಡಿಸುವ ಕಾರಣ ನಾಗರಹಾವುಗಳು ರಸ್ತೆಗಳಲ್ಲಿ ಅಡ್ಡ ದಿಡ್ಡಿ ಓಡಾಡಿ ವಾಹನಗಳಿಗೆ ಸಿಕ್ಕಿ ಸಾಯುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ.

ಮರದ ಬುಡದಲ್ಲಿ ಹಾಡಿ(ಕಾಡಿನಲ್ಲಿ)ಯಲ್ಲಿ ನಾಗಬನವಿದ್ರೆ ಅಲ್ಲಿ ನಾಗರ ಹಾವುಗಳು ಮರಿ ಮೊಟ್ಟೆಯೊಡನೆ ಜೀವಿಸುತ್ತವೆ. ಎಲ್ಲಾ ಕಡೆ ಮರ ಕಡಿದು ಪ್ರಕೃತಿ ನಾಶ ಮಾಡುವುದರಿಂದ ನಾಗನಿಗೆ ಮನೆಯಿಲ್ಲದಂತಾಗಿದೆ.

ನಾಗಬನ ಮಾಡುವವರು ಗಿಡ ಮರಗಳ ನಡುವೆ ಪ್ರಕೃತಿ ಮಡಿಲಿನ ಸ್ವಚ್ಚ ಹಸಿರಿನ ಸುಂದರ ನಾಗಬನ ನಿರ್ಮಾಣವಾಗಬೇಕಾಗಿದೆ.

 

Related Articles

Back to top button
error: Content is protected !!