ಉಡುಪಿ ಶ್ರೀ ಕೃಷ್ಣನಿಗೆ 18 ಅಧ್ಯಾಯಗಳು ಮತ್ತು 700 ಶ್ಲೋಕಗಳಿರುವ 2 ಕೋಟಿ ರೂಪಾಯಿಯ ಚಿನ್ನದ ಭಗವದ್ಗೀತೆ ಸಮರ್ಪಣೆ
Views: 48
ಕನ್ನಡ ಕರಾವಳಿ ಸುದ್ದಿ: ಪುತ್ತಿಗೆ ಶ್ರೀಗಳ ಪರ್ಯಾಯ ಸಮಾಪನ ಹಂತ ತಲುಪಿದೆ. ತಮ್ಮ ಸಂಪೂರ್ಣ ಪರ್ಯಾಯದ ಅವಧಿಯನ್ನು ಭಗವದ್ಗೀತೆಯ ಪ್ರಚಾರಕ್ಕೆ ಬಳಸಿಕೊಂಡ ಶ್ರೀಗಳು ಇದೀಗ ಮತ್ತೊಂದು ಮಹತ್ವದ ಕೊಡುಗೆ ನೀಡಿದ್ದಾರೆ. ದೆಹಲಿಯ ದಾನಿಯೊಬ್ಬರು ನೀಡಿರುವ 2 ಕೋಟಿ ರೂ ವೆಚ್ಚದ ಚಿನ್ನದ ಭಗವದ್ಗೀತೆಯನ್ನು ಅವರು ಕೃಷ್ಣನಿಗೆ ಸಮರ್ಪಿಸಿದ್ದಾರೆ.
ಭಗವದ್ಗೀತೆಯ 18 ಅಧ್ಯಾಯಗಳನ್ನು ಚಿನ್ನದ ಹಾಳೆಗಳಲ್ಲಿ ಬರೆಯಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಎಸ್.ಲಕ್ಷ್ಮಿ ನಾರಾಯಣನ್ ಎಂಬವರು ಈ ಅಪರೂಪದ ಗ್ರಂಥವನ್ನು ಕೃಷ್ಣಮಠಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ವಿಶಿಷ್ಟ ಭಗವದ್ಗೀತೆಯಲ್ಲಿ ಎಲ್ಲ 18 ಅಧ್ಯಾಯಗಳು ಮತ್ತು 700 ಶ್ಲೋಕಗಳಿವೆ.ಉಡುಪಿ ಶ್ರೀ ಕೃಷ್ಣನಿಗೆ ಚಿನ್ನದ ಭಗವದ್ಗೀತೆ ಸಮರ್ಪಣೆ ಕೃಷ್ಣದೇವರಿಗೆ ಸಮರ್ಪಣೆಯ ವೇಳೆ ರಥ ಬೀದಿಯಲ್ಲಿ ಚಿನ್ನದ ಭಗವದ್ಗೀತೆಯ ಮೆರವಣಿಗೆ ನಡೆಯಿತು. ಚಿನ್ನದ ಪಾರ್ಥ ಸಾರಥಿ ರಥದಲ್ಲಿ ಮೆರವಣಿಗೆ ನಡೆಸಲಾಯಿತು. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಪರ್ಯಾಯ ಪುತ್ತಿಗೆ ಶ್ರೀಗಳು ಮಾತನಾಡಿ, “ಭಗವದ್ಗೀತೆ ಎಲ್ಲರ ಹೃದಯದಲ್ಲಿ ಅವ್ಯಕ್ತವಾಗಿದೆ. ಅದನ್ನು ವ್ಯಕ್ತಗೊಳಿಸುವುದು ನಮ್ಮ ಕರ್ತವ್ಯ. ನಮ್ಮಲ್ಲಿ ಸುಪ್ತವಾದ ಭಗವದ್ಗೀತೆಯ ಅಸ್ತಿತ್ವವನ್ನು ಗುರುತಿಸಿ ಜಾಗೃತಗೊಳಿಸಿದರೆ, ಗೀತಾ ಪ್ರಚಾರ ಸಾಧ್ಯ. ಅದಕ್ಕಾಗಿ ಎಲ್ಲರೂ ಕಟಿಬದ್ಧರಾಗಬೇಕು” ಎಂದು ಕರೆ ನೀಡಿದರು.
“ಕೋಟಿ ಗೀತಾ ಲೇಖನ ಯಜ್ಞ ಘೋಷಿಸುವಾಗ ನಮಗೆ ಹಿಂಜರಿಕೆ ಇತ್ತು. ಆದರೆ, ಆ ನಂತರ ಜನರಿಂದ ವ್ಯಕ್ತವಾದ ಪ್ರತಿಕ್ರಿಯೆ ಅದ್ಭುತವಾಗಿತ್ತು. ಅದನ್ನು ಇನ್ನೂ ಎರಡು ವರ್ಷಕ್ಕೆ ವಿಸ್ತರಿಸಿದ್ದೇವೆ” ಎಂದು ಹೇಳಿದರು.
“ಸಮಗ್ರ ಭಗವದ್ಗೀತೆಯ ಶಾಶ್ವತ ಪ್ರಚಾರಕ್ಕಾಗಿ ಗೀತಾ ಮಂದಿರ ನಿರ್ಮಿಸಿದ್ದೇವೆ. ಕೃಷ್ಣನ ಸಂದೇಶದ ಜ್ಞಾನ ಭಕ್ತರಿಗೆ ದೊರಕಬೇಕೆಂಬುದು ಅದರ ಉದ್ದೇಶ. ಉಡುಪಿಯು ಅನ್ನಬ್ರಹ್ಮನ ಜೊತೆ ಜ್ಞಾನ ಬ್ರಹ್ಮನ ಕ್ಷೇತ್ರವೂ ಹೌದು” ಎಂದರು.






