ಆಸ್ಪತ್ರೆಯಿಂದ ಹೊರಬಂದು ಕೋಟೇಶ್ವರ ಕೋಟಿತೀರ್ಥ ಕೆರೆಗೆ ಹಾರಿ ಆತ್ಮಹತ್ಯೆ

Views: 0
ಕುಂದಾಪುರ: ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಯೂಬ್ಬರು ಹೊರಗೆ ಬಂದು ಹತ್ತಿರದ ಕೋಟಿಲಿಂಗೇಶ್ವರ ದೇವಾಲಯದ ಕೋಟಿ ತೀರ್ಥ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಸಂಜೆ ನಡೆದಿದೆ.
ಮೃತ ಪಟ್ಟವರು ಸುರೇಂದ್ರ ಮೇರ್ಟ (70) ಎಂದು ಗುರುತಿಸಲಾಗಿದೆ.
ಕೋಟ ಶ್ರೀ ಹಿರೇ ಮಹಾಲಿಂಗೇಶ್ವರ ದೇವಾಲಯ ಸಮೀಪದ ನಿವಾಸಿಯಾಗಿರುವ ಸುರೇಂದ್ರ ಮೇರ್ಟ ಅವರು, ಅನಾರೋಗ್ಯದಿಂದಾಗಿ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಸಂಜೆ ಪತ್ನಿ ಮತ್ತು ಪುತ್ರಿ ಆಸ್ಪತ್ರೆಗೆ ಬಂದು ಇವರ ಯೋಗಕ್ಷೇಮ ವಿಚಾರಿಸಿ ಊಟ ಕೊಟ್ಟು ಹೋಗಿದ್ದರು. ಅವರೆಲ್ಲ ಮನೆಗೆ ಹೋಗುತ್ತಿದ್ದಂತೆಯೇ ಸುರೇಂದ್ರ ಆಸ್ಪತ್ರೆಯಿಂದ ಹೊರಬಂದು ಸೀದಾ ಸರೋವರ ಹತ್ತಿರ ತಲುಪಿದ್ದಾರೆ.ಗುಡುಗು ಸಿಡಿಲು ಮಳೆಯ ಹನಿ ಇದ್ದ ಕಾರಣ ಕೆರೆಯ ದಡದಲ್ಲಿ ಜನ ಸಂಚಾರ ವಿರಳವಾಗಿತ್ತು. ಅವರು ಏಕಾಏಕಿ ನೀರಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೂಡಲೇ ಮೃತದೇಹವನ್ನು ಹೊರತೆಗೆಯಲಾಯಿತು.
ಕುಂದಾಪುರ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದು, ಮೃತ ದೇಹವನ್ನು ಶವಾಗಾರದಲ್ಲಿರಿಸಲಾಗಿದೆ. ಸೋಮವಾರ ಮರಣೋತ್ತರ ಪರೀಕ್ಷೆ ನಡೆಸುವುದಾಗಿ ತಿಳಿದುಬಂದಿದೆ.






