ಅಸಹಜ ಲೈಂಗಿಕ ದೌರ್ಜನ್ಯ; ಸೂರಜ್ ರೇವಣ್ಣ ಬಂಧನ ಸಾಧ್ಯತೆ

Views: 72
ಹಾಸನ: ಅಸಹಜ ಲೈಂಗಿಕ ದೌರ್ಜನ್ಯ, ಸಲಿಂಗ ಕಾಮ ಆರೋಪದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಂತ್ರಸ್ತ ನೀಡಿದ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಡಿಜಿ ಕಚೇರಿಯಲ್ಲಿ ಶುಕ್ರವಾರ ಸಂತ್ರಸ್ತ, ಜೆಡಿಎಸ್ ಕಾರ್ಯಕರ್ತ ದೂರು ನೀಡಿದ್ದರು. ಹಾಸನ ಎಸ್‌ಪಿಗೆ ದೂರಿನ ಪ್ರತಿ ಮೇಲ್ ಮಾಡಲಾಗಿತ್ತು. ಇ- ಮೇಲ್ ಆಧರಿಸಿ ಸಂತ್ರಸ್ತನನ್ನು ಕರೆಸಿ ಮಾಹಿತಿ ಪಡೆದು, ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಮತ್ತೊಂದೆಡೆ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಅಲ್ಲಗಳೆದಿರುವ ಸೂರಜ್ ರೇವಣ್ಣ, ಆಡಿಯೊ ವೈರಲ್ ಸಂಬಂಧ ಪ್ರತಿ ದೂರು ದಾಖಲಿಸಲು ಮುಂದಾಗಿದ್ದಾರೆ.
ಸಂತ್ರಸ್ತನ ವಿರುದ್ಧ ಸೂರಜ್ ಪ್ರತಿ ದೂರು
ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪ ಮಾಡಿರುವ ಸಂತ್ರಸ್ತನ ವಿರುದ್ಧ ಪ್ರತಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ವಿರುದ್ಧ ಶುಕ್ರವಾರ ಪ್ರಕರಣ ದಾಖಲಾಗಿತ್ತು. ಇದೀಗ ಸಂತ್ರಸ್ತ ಮಾತನಾಡಿರುವ ಆಡಿಯೊ ಬಗ್ಗೆ ಮಾಹಿತಿ ನೀಡಲು ಪೊಲೀಸರನ್ನು ಭೇಟಿಯಾಗಲು ಸೂರಜ್ ತೆರಳಿದ್ದಾರೆ. ಆಡಿಯೊ ಸಂಬಂಧ ಹಾಸನದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಸೂರಜ್ ರೇವಣ್ಣ ತೆರಳಿದ್ದಾರೆ. ಆಡಿಯೋ ಸಾಕ್ಷ್ಯ ಸಮೇತ ಠಾಣೆಗೆ ಸೂರಜ್ ರೇವಣ್ಣ ತೆರಳಿದ್ದಾರೆ ಎನ್ನಲಾಗಿದೆ.
ಬಂಧನ ಸಾಧ್ಯತೆ?
ಡಾ. ಸೂರಜ್ ರೇವಣ್ಣಗೆ ಬ್ಲಾಕ್‌ಮೇಲ್ ಪ್ರಕರಣದಲ್ಲಿ ವ್ಯಕ್ತಿ ವಿರುದ್ಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ನೆನ್ನೆ ದಾಖಲಾಗಿದ್ದ ಎಫ್‌ಐಆರ್ ವಿಚಾರಣೆಗಾಗಿ ಹಾಸನ ಸೆನ್ ಪೊಲೀಸ್ ಠಾಣೆಗೆ ಎಂಎಲ್‌ಸಿ ಸೂರಜ್ ರೇವಣ್ಣ ತೆರಳಿದ್ದಾರೆ. ಮತ್ತೊಂದೆರೆ ಅವರ ವಿರುದ್ಧ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಹೀಗಾಗಿ ಸೆನ್ ಪೊಲೀಸ್ ಠಾಣೆ ಪೊಲೀಸರು ಸೂರಜ್ ರೇವಣ್ಣರನ್ನು ಬಂಧಿಸುವ ಸಾಧ್ಯತೆ ಇದೆ.
ಏನಿದು ಪ್ರಕರಣ?
ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ದೌರ್ಜನ್ಯ ಎಸಗಿದ್ದು, ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಸೂರಜ್ ರೇವಣ್ಣ ವಿರುದ್ಧ ಅರಕಲಗೂಡಿನ ಜೆಡಿಎಸ್ ಕಾರ್ಯಕರ್ತರೊಬ್ಬರು ಆರೋಪ ಮಾಡಿದ್ದರು. ಈ ಬಗ್ಗೆ ಡಿಜಿಪಿ, ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ದೂರು ಸಲ್ಲಿಸಿದ್ದರು.
ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಉದ್ಯೋಗಿಯಾದ ಜೆಡಿಎಸ್ ಕಾರ್ಯಕರ್ತ, ಜೂನ್ 16ರಂದು ಸೂರಜ್ ತನಗೆ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿ, ಗನ್ನಿಕಡ ತೋಟದ ಮನೆಗೆ ಆಹ್ವಾನಿಸಿದ್ದರು. ಉದ್ಯೋಗ ನೀಡುವ ಭರವಸೆ ನೀಡಿ ತನ್ನನ್ನು ಕರೆಸಿಕೊಂಡು, ಸಲಿಂಗ ಕಾಮಕ್ಕೆ ಒತ್ತಾಯಿಸಿ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದರಿಂದ ನನ್ನ ದೇಹದ ಮೇಲೆ ಗಾಯಗಳಾಗಿದ್ದು, ಈ ಬಗ್ಗೆ ಎಲ್ಲಾದರೂ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ. ಅಸಹಜ ಲೈಂಗಿಕ ದೌರ್ಜನ್ಯದಿಂದ ದೇಹದ ಹಲವು ಭಾಗಗಳಲ್ಲಿ ಕಚ್ಚಿದ ಗುರುತುಗಳಿವೆ, ಮರ್ಮಾಂಗದ ಮೇಲೂ ಗಾಯವಾಗಿದೆ ಎಂದು ದೂರುದಾರ ಆರೋಪಿಸಿದ್ದರು.
ಮತ್ತೊಂದೆಡೆ ದೂರು ನೀಡಿದ್ದ ವ್ಯಕ್ತಿ ವಿರುದ್ಧವೇ ಹೊಳೆನರಸೀಪುರ ನಗರ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್ ದಾಖಲಾಗಿತ್ತು. ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿದ್ದಾರೆ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಜೆಡಿಎಸ್ ಕಾರ್ಯಕರ್ತನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.






