ಅಮ್ಮ ಬೈಕ್ ಕೊಡಿಸಲಿಲ್ಲ ಎಂದು ನೇಣಿಗೆ ಶರಣಾದ ಕಾಲೇಜು ವಿದ್ಯಾರ್ಥಿ

Views: 170
ಬೆಂಗಳೂರು: ಅಮ್ಮ ಬೈಕ್ ಕೊಡಿಸಲಿಲ್ಲ ಎಂದು ತಾಳ್ಮೆ ಕಳೆದುಕೊಂಡು ಮಗ ದುಡುಕಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ
ಎರಡನೇ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಅಯ್ಯಪ್ಪ (20) ಮೃತ ದುರ್ದೈವಿ
ತಮಿಳುನಾಡು ಮೂಲದ ಅಯ್ಯಪ್ಪ ತನ್ನ ತಾಯಿ ಜತೆಗೆ ಬೆಂಗಳೂರಲ್ಲೇ ಬಂದು ನೆಲೆಸಿದ್ದ. ಥಣಿಸಂದ್ರದಲ್ಲಿ ಮನೆ ಮಾಡಿಕೊಂಡು ವಾಸವಿದ್ದರು. ಆರು ವರ್ಷಗಳ ಹಿಂದಷ್ಟೇ ಅಯ್ಯಪ್ಪ ತಂದೆ ತೀರಿ ಹೋಗಿದ್ದರು. ತಾಯಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡು ಮಗನನ್ನು ಓದಿಸುತ್ತಿದ್ದರು. ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಅಯ್ಯಪ್ಪಗೆ ಇತ್ತೀಚಿಗೆ ಬೈಕ್ ಕ್ರೇಜ್ ಹೆಚ್ಚಾಗಿತ್ತು. ಬೈಕ್ ಕೊಡಿಸುವಂತೆ ಅಮ್ಮನ ಹಿಂದೆ ಬಿದ್ದಿದ್ದ, ಆದರೆ ಬೈಕ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸೆಪ್ಟೆಂಬರ್ 11 ರ ಮಂಗಳವಾರ ಅಯ್ಯಪ್ಪ ತಾಯಿ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆಂದು ಹೋಗಿದ್ದರು. ಸಂಜೆ 4:30ರ ಸುಮಾರಿಗೆ ಮನೆಗೆ ವಾಪಸಾದಾಗ ಮಗ ನೇಣು ಕುಣಿಕೆಯಲ್ಲಿ ನೇತಾಡ್ತಿದ್ದ. ಇದರಿಂದ ಗಾಬರಿಗೊಂಡ ತಾಯಿ ಸಂಬಂಧಿಕರಿಗೆ ತಿಳಿಸಿದ್ದಾರೆ. ಸಂಬಂಧಿಕರು ಬಂದು ಹೆಣ್ಣೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತದೇಹ ಕೆಳಗೆ ಇಳಿಸಿ ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದಾರೆ.






