ಮಂಗಳೂರು ವಿಶ್ವವಿದ್ಯಾನಿಲಯ ಡಿಜಿ ಲಾಕರ್ ಗೊಂದಲ: ಅಂಕಪಟ್ಟಿ ಸಿಗದೆ ಸಂಕಷ್ಟಕ್ಕೆ ಸಿಲುಕಿದ ವಿದ್ಯಾರ್ಥಿಗಳು!

Views: 112
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯಲ್ಲಿ ವ್ಯಾಸಂಗ ಮಾಡಿದ ಮತ್ತು ಮಾಡುತ್ತಿರುವ 2022-23ನೇ ಸಾಲಿನ ನಂತರದ ವಿದ್ಯಾರ್ಥಿಗಳು ಅಂಕಪಟ್ಟಿ ಗೊಂದಲದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸರ್ಕಾರದ ನಿಯಮದ ಪ್ರಕಾರ ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳು ಅಂಕಪಟ್ಟಿಯನ್ನು ಡಿಜಿ ಲಾಕರ್ನಲ್ಲಿ ಅಪ್ಡೇಟ್ ಮಾಡಬೇಕು. ಅದರಂತೆ ವಿದ್ಯಾರ್ಥಿಗಳು ಡಿಜಿ ಲಾಕರ್ನಿಂದ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಆದರೆ, ಈ ವ್ಯವಸ್ಥೆ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಹೈರಾಣು ಮಾಡಿದೆ.
ಡಿಜಿ ಲಾಕರ್ ವ್ಯವಸ್ಥೆಯಿಂದ ವಿಶ್ವವಿದ್ಯಾನಿಲಯದ ಕಡೆಯಿಂದ ದೊರಕಬೇಕಾದ ಭೌತಿಕ ಅಂಕಗಳನ್ನು ಹೊಂದಿದ ಅಂಕಪಟ್ಟಿ ದೊರೆಯುತ್ತಿಲ್ಲ. ಈ ವಿಚಾರವಾಗಿ ವಿದ್ಯಾರ್ಥಿಗಳು ಉಪ ಕುಲಪತಿಗಳನ್ನು ಕೇಳಿದಾಗ, ಪ್ರಸ್ತುತ ಭೌತಿಕ ಅಂಕಪಟ್ಟಿಗಳನ್ನು ನೀಡದಿರುವಂತೆ ಸರ್ಕಾರದ ಆದೇಶವಿರುವುದಾಗಿಯೂ, ಈ ವಿಚಾರದಲ್ಲಿ ಬದಲಾವಣೆ ತರಲು ಸರ್ಕಾರಕ್ಕೆ ಮಾತ್ರ ಸಾಧ್ಯವಿರುವುದಾಗಿಯೂ ತಿಳಿಸಿದ್ದಾರೆ.
ಸೆಮಿಸ್ಟರ್ ಒಂದಕ್ಕೆ ₹230ರಂತೆ ಅಂಕಪಟ್ಟಿ ಶುಲ್ಕವನ್ನು ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಗಳು ಪಾವತಿಸಿರುತ್ತಾರೆ. ಪ್ರತಿ ವಿದ್ಯಾರ್ಥಿಗಳಿಂದ ಶುಲ್ಕ ಭರಿಸಿಕೊಂಡ ನಂತರವೂ ಸರಿಯಾದ ಅಂಕಪಟ್ಟಿ ದೊರೆಯುತ್ತಿಲ್ಲ ಎನ್ನುವುದು ವಿದ್ಯಾರ್ಥಿಗಳ ಅಳಲು.
ಪ್ರಸ್ತುತ ಅಂಕಪಟ್ಟಿಗಳನ್ನು ಸರ್ಕಾರದ ಹಲವಾರು ದಾಖಲೆಗಳನ್ನು ಹೊಂದಿರುವ, ಪಡೆದುಕೊಳ್ಳಲು ಬಳಸುವ ಡಿಜಿ ಲಾಕರ್ ತಂತ್ರಜ್ಞಾನದ ಮೂಲಕ ಪಡೆದುಕೊಳ್ಳಲು ವಿಶ್ವವಿದ್ಯಾನಿಲಯ ಸೂಚಿಸುತ್ತದೆ. ಆದರೆ, ಈ ತಂತ್ರಜ್ಞಾನವು ಹಲವಾರು ಸಮಸ್ಯೆಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳಿಗೆ ಸರಿಯಾಗಿ ಅಂಕಪಟ್ಟಿಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ವಿದ್ಯಾರ್ಥಿಗಳ ಸಂಕ್ಷಿಪ್ತ ಅಂಕಗಳು, ಭಾವಚಿತ್ರ, ಸಂಬಂಧಪಟ್ಟ ಅಧಿಕಾರಿಗಳ ಹಸ್ತಾಕ್ಷರ, ಪಠ್ಯ ವಿಷಯಗಳು ಮತ್ತು ಪ್ರೊಜೆಕ್ಟ್ ವಿಷಯಗಳು, ಮತ್ತು ಉತ್ತೀರ್ಣ-ಅನುತ್ತೀರ್ಣತೆಯ ಮಾನದಂಡಗಳನ್ನು ಹೊಂದಿಲ್ಲದ ಡಿಜಿಟಲ್ ಅಂಕಪಟ್ಟಿಗಳು ಸಿಗುತ್ತಿವೆ. ಇದು ವಿದ್ಯಾರ್ಥಿಗಳಿಗೆ ಸಮಸ್ಯೆ ತಂದೊಡ್ಡಿದೆ.
ಅಳಲು ತೋಡಿಕೊಂಡ ವಿದ್ಯಾರ್ಥಿಗಳು: ಡಿಜಿಟಲ್ ಅಂಕಪಟ್ಟಿಯಲ್ಲಿ ಡಿಜಿ ಲಾಕರ್ ಅಂಕಪಟ್ಟಿ ಸರಿಯಾಗಿಲ್ಲ. ವಿದ್ಯಾರ್ಥಿಯ ಭಾವಚಿತ್ರ ಇಲ್ಲ. ಅಂಕಪಟ್ಟಿಯಲ್ಲಿ ಅಂಕವೇ ಇಲ್ಲ. ಈ ಅಂಕಪಟ್ಟಿ ಸರಿಯಾದ ಅಂಕಪಟ್ಟಿ ಅಲ್ಲ ಎಂದು ಅದರಲ್ಲಿ ಹೇಳಲಾಗುತ್ತದೆ. ಆದರೆ ವಿಶ್ವವಿದ್ಯಾನಿಲಯ ಬೇರೆ ಅಂಕಪಟ್ಟಿ ಸಿಗುವುದಿಲ್ಲ ಎನ್ನುತ್ತಾರೆ. ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಬಡ, ಮಧ್ಯಮ ವರ್ಗದಿಂದ ಬಂದವರು. ಕಷ್ಟಪಟ್ಟು ಕಲಿತ ವಿದ್ಯಾರ್ಥಿಗಳಿಗೆ ಸರಿಯಾದ ಅಂಕಪಟ್ಟಿ ಇವರು ಕೊಡ್ತಾ ಇಲ್ಲ” ಎಂದು ಅಳಲು ತೋಡಿಕೊಂಡರು.