ಧಾರ್ಮಿಕ

ಕರ ಸೇವಕರ ಬಂಧನ ವಿರೋಧಿಸಿ ಪ್ರತಿಭಟನೆ: ಸುನಿಲ್ ಕುಮಾರ್, ಸಿಟಿ ರವಿ ಪೊಲೀಸ್ ವಶಕ್ಕೆ 

Views: 34

ಬೆಂಗಳೂರು, ಕರ ಸೇವಕರ ಬಂಧನ ವಿರೋಧಿಸಿ ಬಿಜೆಪಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ನಾನು ಕರ ಸೇವಕ ನನ್ನನ್ನು ಬಂಧಿಸಿ ಅಭಿಯಾನವನ್ನು ಬಿಜೆಪಿ ನಾಯಕರು ನಡೆಸಿದ್ದು, ಅದರ ಭಾಗವಾಗಿ ಬಿಜೆಪಿಯ ಶಾಸಕ ಸುನಿಲ್‌ಕುಮಾರ್ ಹಾಗೂ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಇಂದು ಏಕಾಂಗಿಯಾಗಿ ಧರಣಿ ನಡೆಸಿ ಕರ ಸೇವಕರ ಬಿಡುಗಡೆಗೆ ಆಗ್ರಹಿಸಿದರು.

ಶಾಸಕ ಸುನಿಲ್‌ಕುಮಾರ್ ಅವರು ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣೆಯ ಮುಂದೆ ಏಕಾಂಗಿಯಾಗಿ ಧರಣಿ ನಡೆಸಿದರೆ, ಮಾಜಿ ಸಚಿವ ಸಿ.ಟಿ ರವಿ ಅವರು ಚಿಕ್ಕಮಗಳೂರು ಪೊಲೀಸ್ ಠಾಣೆಯ ಮುಂದೆ ನಾನು ಕರ ಸೇವಕ ನನ್ನನ್ನು ಬಂಧಿಸಿ ಎಂದು ಭಿತ್ತಿಪತ್ರವನ್ನು ಹಿಡಿದು ಧರಣಿ ನಡೆದಿದರು. ಪೊಲೀಸ್ ಠಾಣೆಯ ಮುಂದೆ ಧರಣಿಗೆ ಅವಕಾಶವಿಲ್ಲದಿರುವುದರಿಂದ ಈ ಇಬ್ಬರು ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಕಾಂಗ್ರೆಸ್ ಸರ್ಕಾರದ ರಾಮ ವಿರೋಧಿ ನೀತಿಯನ್ನು ಖಂಡಿಸಿ ನಾನೊಬ್ಬ ಕರ ಸೇವಕ ನನ್ನನ್ನು ಬಂಧಿಸಿ ಎಂಬ ಅಭಿಯಾನ ಇವತ್ತಿನಿಂದ ಆರಂಭವಾಗಿದೆ. ರಾಜ್ಯದೆಲ್ಲೆಡೆ ಈ ಅಭಿಯಾನ ಮುಂದುವರೆಯಲಿದೆ ಎಂದು ಶಾಸಕ ಸುನಿಲ್ ಕುಮಾರ್ ಪ್ರತಿಭಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು. ರಾಮಭಕ್ತರ್‍ನು ಬೆದರಿಸುವ ಕಾರ್ಯವನ್ನುಸರ್ಕಾರ ಬಿಡಬೇಕು. ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಸಹಕಾರ ಕೊಡಬೇಕು ಎಂದು ಹೇಳಿದರು.

ರಾಮಭಕ್ತ ಶ್ರೀಕಾಂತ್ ಪೂಜಾರಿ ವಿರುದ್ಧ ಕ್ರಿಮಿನಲ್ ಆರೋಪವಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನೂ ಕೂಡ ಹತ್ತಾರು ಹೋರಾಟಗಳಲ್ಲಿ ಭಾಗವಹಿಸಿದಾಗ ಪೊಲೀಸರು ಕೇಸ್‌ಗಳನ್ನು ಹಾಕುತ್ತಾರೆ. ಹಾಗಿದ್ದರೆ ನಾನು ಕ್ರಿಮಿನಲ್ಲಾ ಎಂದು ಪ್ರಶ್ನಿಸಿ ರಾಜಕಾರಣಿಗಳು ಒಂದಲ್ಲ ಒಂದು ಹೋರಾಟದಲ್ಲಿ ಪಾಲ್ಗೊಂಡಿರುತ್ತಾರೆ. ಕೇಸು ಹಾಕಿದ ತಕ್ಷಣ ಕ್ರಿಮಿನಲ್ ಎನ್ನುವುದಾದರೆ ಎಲ್ಲ ರಾಜಕಾರಣಿಗಳು ಕೂಡ ಕ್ರಿಮಿನಲ್ ಆಗುತ್ತಾರೆ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದರು.

ಕರ ಸೇವೆಯಲ್ಲಿ ಭಾಗವಹಿಸಿದ ರಾಮಭಕ್ತರು ಮಾತ್ರ ಕಾಂಗ್ರೆಸ್ಸಿಗರಿಗೆ ಕ್ರಿಮಿನಲ್ ತರ ಕಾಣಿಸುತ್ತಾರೆ. ಆದರೆ, ಕುಕ್ಕರ್ ಬಾಂಬ್ ಸ್ಫೋಟ, ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಯಲ್ಲಿ ಭಾಗಿಯಾದವರು ಕಾಂಗ್ರೆಸ್ ಪಕ್ಷಕ್ಕೆ ಬ್ರದರ್‍ಸ್ ಆಗಿ ಕಾಣುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಹುಬ್ಬಳ್ಳಿಯಲ್ಲಿ 31 ವರ್ಷಗಳ ಹಿಂದಿನ ಪ್ರಕರಣವನ್ನು ಇಟ್ಟುಕೊಂಡು ಕರ ಸೇವಕ ಶ್ರೀಕಾಂತ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದರು ಇದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿ ರಾಜ್ಯಸರ್ಕಾರದ ಈ ನಡೆಯನ್ನು ಖಂಡಿಸಿ, ಹಾಗೂ ಕರ ಸೇವಕರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ನಿನ್ನೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನಾ ಧರಣಿ ನಡೆಸಿತ್ತು. ಅದರ ಮುಂದಿನ ಭಾಗವಾಗಿ ಇಂದು ನಾನೂ ಕರ ಸೇವಕ ನನ್ನನ್ನು ಬಂಧಿಸಿ ಎಂಬ ಅಭಿಯಾನವನ್ನು ಬಿಜೆಪಿ ನಾಯಕರು ನಡೆಸಿದ್ದಾರೆ.

Related Articles

Back to top button