ಬಿಜೆಪಿ ಆಡಳಿತದಲ್ಲಿ ‘ಸಪ್ತಪದಿ’ ಕಾಂಗ್ರೆಸ್ ಆಡಳಿತದಲ್ಲಿ ‘ಮಾಂಗಲ್ಯ ಭಾಗ್ಯ’ಎಲ್ಲಾ ದೇವಸ್ಥಾನಗಳಿಗೂ ಈ ಯೋಜನೆ ವಿಸ್ತರಣೆ

Views: 1
ಬೆಂಗಳೂರು: ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದನ್ನು ಕಂಡು ಬಿ.ಎಸ್.ಯಡಿಯೂರಪ್ಪ ಅವರ ಅಧಿಕಾರವಧಿಯಲ್ಲಿ ಬಿಜೆಪಿ ಸರ್ಕಾರವು ವಧು-ವರರ ಸರಳ ವಿವಾಹಕ್ಕಾಗಿ ಜಾರಿಗೆ ತಂದಿದ್ದ ‘ಸಪ್ತಪದಿ’ ಸರಳ ಸಾಮೂಹಿಕ ವಿವಾಹ ಯೋಜನೆ.ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ಸಪ್ತಪದಿ ವಿವಾಹ ಯೋಜನೆ ಎಂಬ ಹೆಸರನ್ನು ‘ಮಾಂಗಲ್ಯ ಭಾಗ್ಯ’ ಎಂದು ಬದಲಿಸಿದೆ. ಈ ಯೋಜನೆಯನ್ನು ಕುರಿತು ರಾಜ್ಯ ಮುಜರಾಯಿ ಇಲಾಖೆ ಹೊಸ ಮಾರ್ಗಸೂಚಿಗಳೊಂದಿಗೆ ಸುತ್ತೋಲೆ ಹೊರಡಿಸಿದೆ.
ಬಿಜೆಪಿ ಸರ್ಕಾರ 2020ರ ಜ.10ರಂದು ಸಪ್ತಪದಿ ಯೋಜನೆಯನ್ನು ಜಾರಿಗೆ ತಂದಾಗ ಕೋಟಾ ಶ್ರೀನಿವಾಸ ಪೂಜಾರಿ ಮುಜರಾಯಿ ಇಲಾಖೆಯ ಸಚಿವರಾಗಿದ್ದರು. ಇಲ್ಲಿಯವರೆಗೂ ಸಪ್ತಪದಿ ಯೋಜನೆಯಡಿ ಸರಿ ಸುಮಾರು 200ಕ್ಕೂ ಹೆಚ್ಚು ವಿವಾಹಗಳು ನಡೆದಿವೆ.
ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡಿ, “ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಯಂತೆ ‘ಮಾಂಗಲ್ಯ ಭಾಗ್ಯ’ ಯೋಜನೆಯು ಸಾಮೂಹಿಕ ವಿವಾಹಗಳನ್ನು ಮಾಡಲು ಮುಂದಾಗಿದೆ. ಯೋಜನೆಯ ಉದ್ದೇಶವು ಮದುವೆಗೆ ದುಂದು ವೆಚ್ಚ ಮಾಡುವ ಮೂಲಕ ಬಡ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸುವುದಾಗಿದೆ. ಇತ್ತೀಚೆಗೆ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಈ ಸಪ್ತಪದಿ ವಿವಾಹ ಯೋಜನೆಗೆ ‘ಮಾಂಗಲ್ಯ ಭಾಗ್ಯ’ ಎಂದು ಮರು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ.
ಈ ಯೋಜನೆಯನ್ನು ರಾಜ್ಯದ ಎಲ್ಲಾ ದೇವಸ್ಥಾನಗಳಿಗೂ ವಿಸ್ತರಿಸಲಾಗಿದ್ದು, ಮಾಂಗಲ್ಯ ಭಾಗ್ಯ ಎಂಬ ಹೆಸರು ಸೂಕ್ತವಾಗಿದೆ ಎಂದು ಇದನ್ನೇ ಇಡಲು ಇಚ್ಛಿಸಲಾಗಿದೆ. ಇದನ್ನು ಹೊರತುಪಡಿಸಿ ಯೊಜನೆಯಲ್ಲಿ ಇನ್ನಾವುದೇ ಬದಲಾವಣೆಗಳಿಲ್ಲ ” ಎಂದು ತಿಳಿಸಿದ್ಧಾರೆ.
“ಸರಳ ಸಾಮೂಹಿಕ ವಿವಾಹ ಯೋಜನೆಗೆ ಮಾಂಗಲ್ಯ ಭಾಗ್ಯ ಎಂಬ ಹೆಸರು ಸೂಕ್ತ ಎನಿಸಿದ್ದರಿಂದ ಇದನ್ನೇ ಮುಂದುವರಿಸುತ್ತಿದ್ದೇವೆ.ಯೋಜನೆಯಲ್ಲಿ ಯಾವುದೇ ರೀತಿಯ ಹೊಸ ಬದಲಾವಣೆಗಳಿಲ್ಲ. ಪ್ರತಿ ಜೋಡಿಗೆ 55 ಸಾವಿರ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ.ಎಲ್ಲಾ ಎ ಮತ್ತು ಬಿ ಗ್ರೇಡ್ ದೇವಾಲಯಗಳಲ್ಲೂ ನಡೆಸಲು ಸೂಚಿಸಿರುವುದರಿಂದ ಬಡವರಿಗೆ ಸಹಾಯವಾಗುತ್ತದೆ” ಎಂದಿದ್ದಾರೆ.
ಮಾಂಗಲ್ಯ ಭಾಗ್ಯ: ಸಪ್ತಪದಿ ಯೋಜನೆಯಡಿಯ ಮಾರ್ಗಸೂಚಿಗಳನ್ನೇ ‘ಮಾಂಗಲ್ಯ ಭಾಗ್ಯ’ದಲ್ಲಿ ಅಳವಡಿಸಲಾಗಿದೆ. ವರನಿಗೆ ಅಂಗಿ-ಧೋತಿ,5000 ರೂ. ನಗದು ಹಾಗೂ ವಧುವಿಗೆ ಮಂಗಳಸೂತ್ರಕ್ಕಾಗಿ ಸೀರೆ, 1,000 ರೂ. ನಗದು, 8 ಗ್ರಾಂ. ಚಿನ್ನದ ತಾಳಿ-ಗುಂಡುಗಳನ್ನು ನೀಡಲಾಗುತ್ತದೆ. ಇದೆಲ್ಲದರ ಒಟ್ಟು ವೆಚ್ಚವು 55 ಸಾವಿರ ರೂ. ಆಗಲಿದ್ದು, ಇದರ ಜತೆಗೆ ದೇವಾಲಯ ಆಡಳಿತ ಮಂಡಳಿಗಳು ಮದುವೆಗೆ ಬರುವ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ನೋಡಿಕೊಳ್ಳಲಿವೆ. ಈ ಯೋಜನೆಯನ್ನು ಆಯ್ದ 100 ದೇವಾಲಯಗಳಲ್ಲಿ ಮಾತ್ರ ಜಾರಿ ಮಾಡಲಾಗಿತ್ತು. ಇದೀಗ ರಾಜ್ಯದ ಎಲ್ಲಾ ದೇವಸ್ಥಾನಗಳಿಗೂ ವಿಸ್ತರಿಸಲು ನಿರ್ಧರಿಸಿರುವುದು ವಿಶೇಷ. ಯೋಜನೆಯಡಿಯಲ್ಲಿ ಸಾಮೂಹಿಕ ವಿವಾಹಕ್ಕೆ ಬೇಕಾಗುವ ವೆಚ್ಚವನ್ನು ದೇವಸ್ಥಾನದ ನಿಧಿಯಿಂದ ಭರಿಸಲಾಗುತ್ತದೆ.ಸದರಿ ದೇವಸ್ಥಾನದಿಂದ ಸಾಧ್ಯವಾಗದಿದ್ದಾಗ ಮಾತ್ರ ವಧು-ವರರಿಗೆ ನೀಡುವ ಆರ್ಥಿಕ ಸಹಾಯ ಧನವನ್ನು ಇಲಾಖೆಯ ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸಲಾಗುವುದು.
ಪ್ರಸ್ತುತ ಯೋಜನೆಯ ಸುತ್ತೋಲೆಯಲ್ಲಿ ನವೆಂಬರ್, ಡಿಸೆಂಬರ್ ಮತ್ತು 2024ರ ಜನವರಿಯಲ್ಲಿ ಸಾಮೂಹಿಕ ವಿವಾಹಕ್ಕಾಗಿ ದೇವಾಲಯಗಳು ಸಜ್ಜಾಗಬೇಕೆಂದು, ಈಗಿನಿಂದಲೇ ವಧು-ವರರ ಹೆಸರು ನೋಂದಾವಣಿಯನ್ನು ಆರಂಭಿಸಬೇಕೆಂದು ದೇವಾಸ್ಥಾನಗಳಿಗೆ ಸೂಚಿಸಲಾಗಿದೆ.






