ಆದಿತ್ಯ L1 ಉಡಾವಣೆ ಯಶಸ್ವಿ; ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ ಇಸ್ರೋ

Views: 1
ಚಂದ್ರಯಾನ-3 ರ ಯಶಸ್ಸಿನ ಖುಷಿಯ ಬೆನ್ನಲ್ಲೇ ಭಾರಾತೀಯ ಬಾಹ್ಯಾಕಾಶ ವಿಜ್ಞಾನ ಸಂಶೋಧನಾ ಸಂಸ್ಥೆ ಇಸ್ರೋ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ
ಭಾರತದ ಮಹತ್ವಾಕಾಂಕ್ಷೆಯ ಸೂರ್ಯಯಾನ ಯೋಜನೆಯ ಅಡಿಯಲ್ಲಿ ಆದಿತ್ಯ ಎಲ್-1 (Aditya L1) ಬಾಹ್ಯಾಕಾಶ ನೌಕೆಯನ್ನು ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ (Satish Dhawan Space Centre) ಆದಿತ್ಯ L1 ಹೊತ್ತ ಪಿಎಸ್‌ಎಲ್‌ವಿ ರಾಕೆಟ್‌ನ (PSLV-XLC57) ಉಡಾವಣೆ ಯಶಸ್ವಿಯಾಗಿದೆ ಎಂದು ಭಾರಾತೀಯ ಬಾಹ್ಯಾಕಾಶ ವಿಜ್ಞಾನ ಸಂಶೋಧನಾ ಸಂಸ್ಥೆ ಇಸ್ರೋ (ISRO) ತಿಳಿಸಿದೆ. ಆ ಮೂಲಕ ಭಾರತವು ಬಾಹ್ಯಕಾಶ ಸಂಶೋಧನಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದಂತಾಗಿದೆ. ಈ ಕ್ಷಣಕ್ಕೆ ಶ್ರೀಹರಿಕೋಟಾದಲ್ಲಿ ಸೇರಿದ್ದ ಸಾವಿರಾರು ಮಂದಿ ಸಾಕ್ಷಿಯಾದರೆ, ಆನ್ಲೈನ್ ನೇರ ಪ್ರಸಾರದ ಮೂಲಕ ಕೋಟ್ಯಂತರ ಮಂದಿ ವೀಕ್ಷಣೆ ಮಾಡಿದರು.
ಆದಿತ್ಯ L1 ಹೊತ್ತ ಪಿಎಸ್‌ಎಲ್‌ವಿ ರಾಕೆಟ್‌ನ ಉಡಾವಣೆಯ ಮಹತ್ವದ ಕ್ಷಣದಲ್ಲಿಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ಇಸ್ರೋದ ವಿಜ್ಞಾನಿಗಳು ಜತೆಯಾದರು. ಆದಿತ್ಯ ಎಲ್1 ಅನ್ನು ಹಲವಾರು ಹಂತಗಳಲ್ಲಿ ಭೂಮಿಯ ಕಕ್ಷೆಯಿಂದ ಹೊರಕ್ಕೆ ತೆಗೆದುಕೊಂಡು ಹೋಗಿ ಲ್ಯಾಗ್ರೇಂಜ್ 1ರಲ್ಲಿ ಸ್ಥಾಪಿಸಲಾಗುತ್ತದೆ.
ಆದಿತ್ಯ L1 ಎಕ್ಸ್‌ಎಲ್ ಆವೃತ್ತಿಯ ಪಿಎಸ್‌ಎಲ್‌ವಿ ರಾಕೆಟ್‌ನ ಸಹಾಯದಿಂದ ಗಮ್ಯಸ್ಥಾನಕ್ಕೆ ಪಯಣಿಸುತ್ತಿದ್ದು, ಸೂರ್ಯನ ಕುರಿತ ಅಧ್ಯಯನಕ್ಕೆ ಇಸ್ರೋ ವಿಜ್ಞಾನಿಗಳಿಗೆ ನೆರವಾಗಲಿದೆ. ಭೂಮಿಯಿಂದ ಸರಿಸುಮಾರು 15 ಲಕ್ಷ ಕಿಮೀ ದೂರದಲ್ಲಿರುವ (930,000 ಮೈಲುಗಳು) ಲ್ಯಾಗ್ರೇಂಜ್ ಪಾಯಿಂಟ್-1 ರಲ್ಲಿ (ಭೂಮಿಯ ಮತ್ತು ಸೂರ್ಯನ ಗುರುತ್ವಾಕರ್ಷಣೆಯು ಪರಸ್ಪರ ಶೂನ್ಯವಾಗಿರುವ ಬಿಂದುವನ್ನು ಲ್ಯಾಗ್ರೇಂಜ್ ಬಿಂದು 1 ಅಥವಾ ಎಲ್1 ಎಂದು ಕರೆಯಲಾಗುತ್ತದೆ) ಬಾಹ್ಯಾಕಾಶ ನೌಕೆಯನ್ನು ಇರಿಸಲಾಗುತ್ತದೆ. ಇಲ್ಲಿಂದ ಭಾರತ ನಿರಂತರವಾಗಿ ಸೂರ್ಯನ ಮೇಲೆ ಕಣ್ಣಿಡಲು ಸಾಧ್ಯವಾಗಲಿದೆ.