ಜನಮನ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ:ಮಳೆಯ ಅಬ್ಬರ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ!

Views: 25

ಕನ್ನಡ ಕರಾವಳಿ ಸುದ್ದಿ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಅಕ್ಟೋಬರ್ 25 ಮತ್ತು 26ರ ಸುಮಾರಿಗೆ ತೀವ್ರ ಚಂಡಮಾರುತವಾಗಿ ಪರಿವರ್ತನೆಯಾಗುವ ಲಕ್ಷಣಗಳಿವೆ.

ಇದರ ಜೊತೆಗೆ ದಕ್ಷಿಣ ಕೇರಳ ಕರಾವಳಿಯಲ್ಲಿ ವಾಯುಸುಳಿಗಾಳಿ ಉಂಟಾಗಿರುವುದರಿಂದ, ಇದರ ಪರಿಣಾಮ ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಾದ್ಯಂತ ಅಕ್ಟೋಬರ್ 29ರ ವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.

ಅಂಡಮಾನ್ ಸಮೀಪ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ತೀವ್ರಗೊಂಡು ಚಂಡಮಾರುತವಾಗಿ ಮಾರ್ಪಾಡಾಗುವ ಸಾಧ್ಯತೆಯಿದೆ. ಇದು ಆಂಧ್ರಪ್ರದೇಶ ಕರಾವಳಿಯತ್ತ ಅಪ್ಪಳಿಸುವ ಮುನ್ಸೂಚನೆ ಇದ್ದು, ಇದರ ನೇರ ಪ್ರಭಾವ ಕರ್ನಾಟಕದ ಹವಾಮಾನದ ಮೇಲೂ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಳೆಯ ಅಬ್ಬರ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ವಾಯುಭಾರ ಕುಸಿತದ ಮಳೆ ಮಾರುತಗಳ ಪ್ರಭಾವದಿಂದ ಕರಾವಳಿ ಜಿಲ್ಲೆಗಳಲ್ಲೂ ಮಳೆಯ ತೀವ್ರತೆ ಹೆಚ್ಚಾಗಲಿದೆ.ಮಳೆಯಾಗುವ ಸಾಧ್ಯತೆಯಿರುವ ಈ ಎಲ್ಲಾ ಪ್ರಮುಖ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ‘ಯೆಲ್ಲೋ ಅಲರ್ಟ್’ ಘೋಷಿಸಿದೆ.

ಮೀನುಗಾರರಿಗೆ ಎಚ್ಚರಿಕೆ!

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯ ಹಾಗೂ ಚಂಡಮಾರುತದ ಎಚ್ಚರಿಕೆಯ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಪ್ರತಿಕೂಲ ವಾತಾವರಣವಿರಲಿದೆ. ಹೀಗಾಗಿ, ಮೀನುಗಾರರು ಮುನ್ನೆಚ್ಚರಿಕೆ ವಹಿಸಿ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಒಟ್ಟಾರೆಯಾಗಿ ಮುಂದಿನ ಕೆಲವು ದಿನಗಳ ಕಾಲ ರಾಜ್ಯದಾದ್ಯಂತ ಮಳೆಯಾಗಲಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಸೂಕ್ತವಾಗಿದೆ.

Related Articles

Back to top button
error: Content is protected !!