ಅಕ್ಟೋಬರ್ 10 ರವರೆಗೆ ಕರಾವಳಿ ಸೇರಿದಂತೆ ವಿವಿಧೆಡೆ ಗುಡುಗು ಸಹಿತ ಮಳೆ ಸಾಧ್ಯತೆ
Views: 42
ಕನ್ನಡ ಕರಾವಳಿ ಸುದ್ದಿ:ಭಾರತದಲ್ಲಿ ಮುಂಗಾರು ಅಂತ್ಯಗೊಂಡಿದೆ. ಈ ಮಧ್ಯೆ ಇಂದಿನಿಂದ ಅಕ್ಟೋಬರ್ 10 ರ ವರೆಗೆ ಮಳೆ, ಗುಡುಗು, ಸಿಡಿಲು ಮತ್ತು ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಕನಿಷ್ಠ 20 ರಾಜ್ಯಗಳಿಗೆ ಮುನ್ನೆಚ್ಚರಿಕೆ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ದೆಹಲಿ-ಎನ್‌ಸಿಆರ್ ಮತ್ತು ಉತ್ತರ ಭಾರತದ ಬಹುಭಾಗದಲ್ಲಿ ಹವಾಮಾನದಲ್ಲಿ ಬದಲಾವಣೆ ಆಗಲಿದೆ ಎಂದು ತಿಳಿಸಿದೆ.
ಸಿಕ್ಕಿಂ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಚಂಡಮಾರುತದ ಪರಿಚಲನೆ ಉಂಟಾಗಿದೆ. ಈಶಾನ್ಯ ಬಿಹಾರದಿಂದ ವಾಯುವ್ಯ ಬಂಗಾಳ ಕೊಲ್ಲಿಯವರೆಗೆ ‘ಟ್ರಫ್’ (ಕಡಿಮೆ ಒತ್ತಡದ ವಲಯದ ಪಟ್ಟಿ) ವ್ಯಾಪಿಸಿದೆ. ಮತ್ತೊಂದು ಚಂಡಮಾರುತದ ಪರಿಚಲನೆಯು ಮನ್ನಾರ್ ಕೊಲ್ಲಿ ಮತ್ತು ದಕ್ಷಿಣ ತಮಿಳುನಾಡು ಕರಾವಳಿಯ ಸಮೀಪದಲ್ಲಿದ್ದು, ಅಲ್ಲಿಂದ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದವರೆಗೆ ಮತ್ತೊಂದು ಟ್ರಫ್ ವಿಸ್ತರಿಸಿದೆ. ಈ ವ್ಯವಸ್ಥೆಗಳು ಒಟ್ಟಾಗಿ ಕೆಲವು ಪ್ರದೇಶಗಳಲ್ಲಿ ಗಂಟೆಗೆ 60 ಕಿಲೋಮೀಟರ್ ವೇಗದ ಗಾಳಿಯನ್ನು ಉಂಟುಮಾಡಬಹುದು. ಬಂಗಾಳ ಕೊಲ್ಲಿಯಲ್ಲಿ ಉಂಟಾದ ಚಂಡಮಾರುತವು ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶಗಳಲ್ಲಿ ಪ್ರವಾಹದಂತಹ ಪರಿಸ್ಥಿತಿಯನ್ನು ಸೃಷ್ಟಿಸಿದ ಕೆಲವೇ ವಾರಗಳ ನಂತರ ಈ ಎಚ್ಚರಿಕೆ ನೀಡಲಾಗಿದೆ.
ವಿಶೇಷ ಸೂಚನೆ:ಮಿಂಚು ಸಿಡಿಯುವಾಗ ಬಯಲು ಪ್ರದೇಶಗಳು, ಮರಗಳು ಮತ್ತು ವಿದ್ಯುತ್ ಕಂಬಗಳಿಂದ ದೂರವಿರಬೇಕು. ನೀರು ನಿಂತಿರುವ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ಪ್ರಯಾಣಿಸುವಂತೆ ಭಾರತೀಯ ಹವಾಮಾನ ಇಲಾಖೆ ಸಾರ್ವಜನಿಕರಿಗೆ ಸಲಹೆ ನೀಡಿದೆ.






