ವಕ್ವಾಡಿಯಲ್ಲಿ ಪ್ರಪ್ರಥಮ ಬಾರಿಗೆ ‘ಆರೋಗ್ಯ ಸ್ಪಂದನ 2026’ ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟನೆ
Views: 81
ಕನ್ನಡ ಕರಾವಳಿ ಸುದ್ದಿ: ವಕ್ವಾಡಿ ಫ್ರೆಂಡ್ಸ್ ವಕ್ವಾಡಿ ಇವರ ನೇತೃತ್ವದಲ್ಲಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಒನ್ ಸೈಟ್ ಎಸ್ಸಿಲಾರ್ ಲಕ್ಸೂಟಿಕಾ ಫೌಂಡೇಶನ್ ಬೆಂಗಳೂರು, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊರ್ಗಿ ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪ್ರೌಢಶಾಲೆ ವಕ್ವಾಡಿಯಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಲಾದ ‘ಆರೋಗ್ಯ ಸ್ಪಂದನ 2026’ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಉದ್ಘಾಟಿಸಿದರು.
ಕಣ್ಣಿನ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಇಂತಹ ಉಚಿತ ತಪಾಸಣಾ ಶಿಬಿರಗಳು ಗ್ರಾಮೀಣ ಭಾಗದ ಜನರಿಗೆ ಅತ್ಯಂತ ಉಪಯುಕ್ತ. ಸಮಯಕ್ಕೆ ಸರಿಯಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರೆ ಅನೇಕ ಸಮಸ್ಯೆಗಳನ್ನು ಆರಂಭದಲ್ಲೇ ತಡೆಯಬಹುದು. ಇಂತಹ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಿದ ವಕ್ವಾಡಿ ಫ್ರೆಂಡ್ಸ್ ಸಂಸ್ಥೆ ಹಾಗೂ ಸಹಕರಿಸಿದ ಎಲ್ಲಾ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನಾಡಿದ ಸಂಸ್ಥೆಯ ಪ್ರಮುಖರಾದ ಕೀರ್ತಿ ಶೆಟ್ಟಿ ವಕ್ವಾಡಿ ಅವರು, ಗ್ರಾಮದ ಪ್ರತಿಯೊಬ್ಬರಿಗೂ ಉಚಿತವಾಗಿ ಉತ್ತಮ ಗುಣಮಟ್ಟದ ನೇತ್ರ ಸೇವೆ ತಲುಪಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಕೃಷ್ಣ ಶೆಟ್ಟಿಗಾರ್ ವಹಿಸಿದ್ದರು.
ಕಾರ್ಯಕ್ರಮದ ವೇದಿಕೆಯಲ್ಲಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಉದ್ಯಮಿಗಳು, ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು, ಧರ್ಮಪ್ರಸಾದ್ ರೈ ಎ., ಡಾ. ಸಂತೋಷ್ ಕುಲಾಲ್ ಕ್ಯಾನ್ಸರ್ ತಜ್ಞರು, ಶ್ರೀಮತಿ ಭಾರತಿ ಎನ್. ಶಾಲಾ ಮುಖ್ಯೋಪಾಧ್ಯಾಯರು, ಶ್ರೀಮತಿ ನಾಗರತ್ನ ಅಧ್ಯಕ್ಷರು ಮಹಿಳಾ ಮಂಡಳಿ ವಕ್ವಾಡಿ ಫ್ರೆಂಡ್ಸ್ ವಕ್ವಾಡಿ, ಶ್ರೀಮತಿ ಮೇದನಿ ಸಿ.ಹೆಚ್.ಒ ಕೊರ್ಗಿ ಉಪಸ್ಥಿತರಿದ್ದರು.
ಇದೇ ವೇಳೆ ಅನೇಕ ನಾಗರಿಕರು ನುರಿತ ತಜ್ಞ ವೈದ್ಯರ ಉಪಸ್ಥಿತಿಯಲ್ಲಿ ಆಯೋಜಿಸಲಾದ ಕಣ್ಣಿನ ಪರೀಕ್ಷೆಯನ್ನು ಮಾಡಿಸಿಕೊಂಡು ಇದರ ಸದುಪಯೋಗ ಪಡೆದುಕೊಂಡರು.
ಕಾರ್ಯಕ್ರಮವನ್ನು ಸತೀಶ್ ಪೂಜಾರಿ ವಕ್ವಾಡಿ ನಿರೂಪಿಸಿದರು. ದೇವಿಪ್ರಸಾದ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.












