ಯುವಜನ

ಖಾಸಗಿ ಫೋಟೋ,ವಿಡಿಯೋ ಮುಂದಿಟ್ಟುಕೊಂಡು ಯುವಕನ ಬ್ಲ್ಯಾಕ್‌ಮೇಲ್‌ಗೆ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ 

Views: 0

ಕನ್ನಡ ಕರಾವಳಿ ಸುದ್ದಿ: ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಯುವಕನ ನಿರಂತರ ಮಾನಸಿಕ ಕಿರುಕುಳ ಹಾಗೂ ಬ್ಲ್ಯಾಕ್‌ಮೇಲ್‌ಗೆ ಬಲಿಯಾಗಿರುವ ಅತ್ಯಂತ ದಾರುಣ ಘಟನೆ ಸಾಗರ ತಾಲೂಕಿನಲ್ಲಿ ಸಂಭವಿಸಿದೆ.

ಸಾಗರದ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಯಶಸ್ವಿ.ವಿ 17 ವರ್ಷದ ವಿದ್ಯಾರ್ಥಿನಿ ಆರೋಪಿಯ ಅತಿಯಾದ ಕಿರುಕುಳ ತಾಳಲಾರದೆ ಕಳೆನಾಶಕ ಸೇವಿಸಿ ಮೃತಪಟ್ಟಿದ್ದಾಳೆ. ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಿಂದ ಕರೆತರುವ ಮಾರ್ಗಮಧ್ಯೆ ಆಕೆ ಸಾವನ್ನಪ್ಪಿದ್ದಾಳೆ.

ಆರೋಪಿ ಸುಮುಖ ಅಡೇರಿ (19) ಎಂಬಾತ ಕಳೆದ ಒಂದೂವರೆ ವರ್ಷಗಳಿಂದ ವಿದ್ಯಾರ್ಥಿನಿಯ ಬೆನ್ನುಬಿದ್ದಿದ್ದ. ಈ ಹಿಂದೆ ಆಕೆಗೆ ಮೊಬೈಲ್ ಫೋನ್‌ಗಳನ್ನು ನೀಡಿ ಸಂಪರ್ಕದಲ್ಲಿದ್ದ ವಿಚಾರ ತಿಳಿದ ಪೋಷಕರು ಎಚ್ಚರಿಕೆ ನೀಡಿದ್ದರೂ, ಆತನ ಚಾಳಿ ಮುಂದುವರಿದಿತ್ತು. ಕಾಲೇಜು ಹಾಗೂ ಬಸ್ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಬೈಕ್‌ನಲ್ಲಿ ಹಿಂಬಾಲಿಸಿ ಚುಡಾಯಿಸುತ್ತಿದ್ದ ಆರೋಪಿ, ಇತ್ತೀಚೆಗೆ ಯುವತಿಯ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದ. “ನಾನು ಕರೆದಾಗಲೆಲ್ಲ ಬರಬೇಕು” ಎಂದು ಬೆದರಿಸಿ ನಡೆಸುತ್ತಿದ್ದ ಮಾನಸಿಕ ಹಿಂಸೆಯನ್ನು ಪೋಷಕರಿಗೆ ಹೇಳಲಾಗದೆ, ಸಮಾಜದ ಮರ್ಯಾದೆಗೆ ಅಂಜಿ ಆಕೆ ಒಳಗೊಳಗೇ ನರಳಿರುವುದು ಬೆಳಕಿಗೆ ಬಂದಿದೆ.

ಆರೋಪಿಯ ನಿರಂತರ ಕಿರುಕುಳ ಮತ್ತು ಬೆದರಿಕೆಯಿಂದ ತೀವ್ರ ಹತಾಶೆಗೆ ಒಳಗಾಗಿದ್ದ ಯುವತಿ, ಕಳೆದ ಆಗಸ್ಟ್ 18ರಂದು ಸಂಜೆ ಕಾಲೇಜಿನಿಂದ ಮರಳಿದ ಬಳಿಕ ಮನೆಯಲ್ಲಿದ್ದ ಕಳೆನಾಶಕವನ್ನು ಸೇವಿಸಿದ್ದಾಳೆ. ಆರಂಭದಲ್ಲಿ ಭಯದಿಂದ ಈ ವಿಚಾರವನ್ನು ಮುಚ್ಚಿಟ್ಟಿದ್ದರೂ, ಆಗಸ್ಟ್ 20ರ ರಾತ್ರಿ ಸ್ಥಿತಿ ವಿಷಮಿಸಿದಾಗ ಆಸ್ಪತ್ರೆಗೆ ದಾಖಲಿಸಲಾಯಿತು. ಶಿವಮೊಗ್ಗದ ಮೆಗ್ಗಾನ್ ಹಾಗೂ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ಸ್ಥಳಾಂತರಿಸುವ ವೇಳೆ, ಕಾರಿನಲ್ಲಿ ಅಳುತ್ತಲೇ ಆರೋಪಿ ಸುಮುಖನ ಅಮಾನವೀಯ ಬ್ಲ್ಯಾಕ್‌ಮೇಲ್ ಕೃತ್ಯವನ್ನು ಪೋಷಕರ ಮುಂದೆ ತೆರೆದಿಟ್ಟಿದ್ದಾಳೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಸಂತ್ರಸ್ತೆಯ ತಂದೆ ಅವರ ದೂರಿನ ಮೇರೆಗೆ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ.

Related Articles

Back to top button
error: Content is protected !!