ಇತರೆ

ಕುರಿಗಳ ವಿಚಾರಕ್ಕೆ ಆರಂಭವಾದ ಗಲಾಟೆ ಮಹಿಳೆಯ ಕೊಲೆಯಲ್ಲಿ ಅಂತ್ಯ..! ಶವಾಗಾರದ ಮುಂದೆ ಸಂಬಂಧಿಕರ ಆಕ್ರೋಶ

Views: 0

ಕನ್ನಡ ಕರಾವಳಿ ಸುದ್ದಿ : ಕುರಿಗಳ ಕೊಂದ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಆರಂಭವಾದ ಗಲಾಟೆ.. ಕೊನೆಗೆ ಮಹಿಳೆಯೊಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.

ಕೋಲಾರ ತಾಲೂಕಿನ ಪಚ್ಚರ್ಲಹಳ್ಳಿ ಗ್ರಾಮದ 65 ವರ್ಷದ ವೆಂಕಟಲಕ್ಷ್ಮಮ್ಮ ಕೊಲೆಯಾಗಿದ್ದಾರೆ. ಆಂಜಪ್ಪ, ಮಂಜುನಾಥ್, ವೆಂಕಟೇಶ್ ಸೇರಿದಂತೆ ಐವರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.

ಕುರಿಗಳ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಹಿಂದಿನಿಂದಲೂ ವೈಷಮ್ಯವಿತ್ತು ಎನ್ನಲಾಗಿದ್ದು, ಇದೇ ವಿಚಾರವಾಗಿ ನಿನ್ನೆ ವೇಮಗಲ್ ಪೊಲೀಸ್ ಠಾಣೆಯಲ್ಲಿ ರಾಜಿ ಪಂಚಾಯ್ತಿ ನಡೆದಿತ್ತು. ಈ ವೇಳೆ ಗಂಗರಾಜು ಎಂಬ ಯುವಕನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಹಲ್ಲೆಗೊಳಗಾದ ಗಂಗರಾಜು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಗ್ರಾಮದಲ್ಲಿ ಮತ್ತೆ ಗಲಾಟೆ ನಡೆದಿದ್ದು, ಈ ವೇಳೆ ವೆಂಕಟಲಕ್ಷ್ಮಮ್ಮ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ವೃದ್ಧೆಯ ಕೊಲೆ ಪ್ರಕರಣ ಇದೀಗ ಪೊಲೀಸರ ವಿರುದ್ಧದ ಆಕ್ರೋಶಕ್ಕೂ ಕಾರಣವಾಗಿದೆ. ಕೊಲೆ ಬೆದರಿಕೆ ಬಗ್ಗೆ ದೂರು ನೀಡಿದ್ದರೂ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ. ಆರೋಪಿಗಳ ಪರ ಪೊಲೀಸರು ನಿಂತಿದ್ದಾರೆ ಎಂದು ಆರೋಪಿಸಿ ಮೃತಳ ಸಂಬಂಧಿಕರು ಕೋಲಾರ ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದರು. ಮರಣೋತ್ತರ ಪರೀಕ್ಷೆಗೂ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿ, ವೇಮಗಲ್ ಸಿಪಿಐ ಮಂಜುನಾಥ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಇನ್ನೂ ಪ್ರತಿಭಟನಾಕಾರರನ್ನು ಮನವೊಲಿಸಿದ ಎಎಸ್ಪಿ ಜಗದೀಶ್, ಯುವಕನ ಮೇಲೆ ಹಲ್ಲೆ ಹಾಗೂ ಕೊಲೆ ಆರೋಪಿಗಳ ಪರ ಪೊಲೀಸರು ನಿಂತಿದ್ದಾರೆ ಎಂಬ ಆರೋಪದ ಕುರಿತು ಸಿಪಿಐ ವಿರುದ್ಧವೂ ಪ್ರಕರಣ ದಾಖಲಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು. ಸದ್ಯ ಪಚ್ಚರ್ಲಹಳ್ಳಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ವೇಮಗಲ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ವೃದ್ಧೆಯ ಕೊಲೆ ಪ್ರಕರಣದ ತನಿಖೆ ಮುಂದುವರಿದಿದೆ.

ಕುರಿಗಳ ವಿಚಾರದಲ್ಲಿ ಆರಂಭವಾದ ಗಲಾಟೆ ವೃದ್ಧೆಯ ಕೊಲೆಯಲ್ಲಿ ಅಂತ್ಯವಾಗಿದೆ. ಪೊಲೀಸರು ಆರಂಭದಲ್ಲೇ ಸೂಕ್ತ ಕ್ರಮ ಕೈಗೊಂಡಿದ್ದರೆ ಅನಾಹುತ ತಪ್ಪಿಸಬಹುದಿತ್ತು ಎಂಬುದು ಕುಟುಂಬಸ್ಥರ ಆರೋಪ. ಇದೀಗ ಪ್ರಕರಣದ ತನಿಖೆ ಯಾವ ದಿಕ್ಕು ಪಡೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.

Related Articles

Back to top button
error: Content is protected !!