ಸಾಲಿಗ್ರಾಮ ಜಾತ್ರೆ ಮುಗಿಸಿ ಮನೆಗೆ ಹೋಗುವಾಗ ಅಪರಿಚಿತ ವಾಹನ ಡಿಕ್ಕಿ: ವ್ಯಕ್ತಿ ಸಾವು, ಇನ್ನೋರ್ವ ಗಂಭೀರ ಗಾಯ
Views: 108
ಕನ್ನಡ ಕರಾವಳಿ ಸುದ್ದಿ:ಸಾಲಿಗ್ರಾಮ ಜಾತ್ರೆ ಮುಗಿಸಿ ಮನೆಗೆ ಹೋಗುತ್ತಿರುವಾಗ ಅಪರಿಚಿತ ಕಾರು ಡಿಕ್ಕಿಯಾಗಿ ವ್ಯಕ್ತಿಯೋರ್ವ ಮೃತಪಟ್ಟು ಇನ್ನೊಬ್ಬ ವ್ಯಕ್ತಿ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 66ರ ಸಾಲಿಗ್ರಾಮದ ರಶಿ ಆಟೋ ವೆಲ್ಡಿಂಗ್ ವರ್ಕ್ಸ್ ಅಂಗಡಿಯ ಬಳಿ ಸಂಭವಿಸಿದ ಅಪಘಾತದಲ್ಲಿ ಆರೂರು ಗ್ರಾಮದ ಕುಂಜಾಲು ಪ್ರದೀಪ್ ಆಚಾರ್ಯ (40) ಮೃತಪಟ್ಟವರು. ಶಶಿ (25) ಗಂಭೀರ ಗಾಯಗೊಂಡವರು ಎಂದು ತಿಳಿದುಬಂದಿದೆ.
ಪ್ರದೀಪ್ ಆಚಾರ್ಯ ಮತ್ತು ಶಶಿ ಅವರು ಕುಂಜಾಲಿನಿಂದ ಜ.16 ರಂದು ಸಾಲಿಗ್ರಾಮ ಜಾತ್ರೆ ಪ್ರಯುಕ್ತ ಸಂಜೆ 5 ಗಂಟೆ ಸುಮಾರಿಗೆ ತಮ್ಮ ಕಾರಿನಲ್ಲಿ ಬಂದು ಕಾರನ್ನು ಕಾರ್ಕಡ ಸರಕಾರಿ ಪ್ರಾಥಮಿಕ ಶಾಲೆಯ ಎದುರು ರಸ್ತೆ ಬದಿಯಲ್ಲಿ ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ಗುರುನರಸಿಂಹ ದೇವಸ್ಥಾನದ ಜಾತ್ರೆಗೆ ಹೋಗಿ ರಾತ್ರಿಯವರೆಗೆ ಹಬ್ಬದಲ್ಲಿ ತಿರುಗಾಡಿಕೊಂಡು ವಾಪಸು ಮನೆಗೆ ಹೋಗಲೆಂದು ರಾತ್ರಿ 10:30 ರ ಸುಮಾರಿಗೆ ಪ್ರದೀಪ್ ಆಚಾರ್ಯ ಮತ್ತು ಶಶಿ ರಸ್ತೆಯ ಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ವೇಳೆ ಸಾಲಿಗ್ರಾಮದ ರಶಿ ಆಟೋ ವೆಲ್ಡಿಂಗ್ ವರ್ಕ್ಸ್ ಅಂಗಡಿಯ ಬಳಿ ವಿರುದ್ಧ ದಿಕ್ಕಿನಿಂದ ಅತೀ ವೇಗದಿಂದ ಬಂದ ಕಾರು ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದಾನೆ.
ಗಂಭೀರ ಗಾಯಗೊಂಡ ಪ್ರದೀಪ್ ಆಚಾರ್ಯ ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಕೋಟ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾದ ವಾಹನದ ಪತ್ತೆಗಾಗಿ ಬಲೆ ಬೀಸಿದ್ದಾರೆ.






