ಅಡುಗೆ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಮಕ್ಕಳು ಸಾವು
Views: 55
ಕನ್ನಡ ಕರಾವಳಿ ಸುದ್ದಿ: ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ತಮಿಳುನಾಡಿನ ಚೆನ್ನೈ ಬಳಿಯ ನವಲೂರಿನಲ್ಲಿ ಭಾನುವಾರ ಸಂಭವಿಸಿದೆ. ದುರಂತದಲ್ಲಿ ಏಳು ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೆಂಗಲ್ಪಟ್ಟು ಸಮೀಪದ ನವಲೂರಿನಲ್ಲಿ ಅಕ್ಕಪಕ್ಕದ ಮೂರು ಮನೆಗಳಿಂದ ಇಂದು ಬೆಳಗ್ಗೆ 7:40 ರ ಸುಮಾರಿಗೆ ಭಾರೀ ಸ್ಫೋಟ ಶಬ್ದ ಕೇಳಿ ಬಂದಿತ್ತು. ತಕ್ಷಣವೇ ನೆರೆಹೊರೆಯವರು ಸ್ಥಳಕ್ಕೆ ಆಗಮಿಸಿ ನೋಡಿದಾಗ ಮೂರು ಮನೆಗಳು ಕುಸಿದಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದರು. ಮನೆಗಳಲ್ಲಿನ ಗೃಹೋಪಯೋಗಿ ವಸ್ತುಗಳು ಛಿದ್ರವಾಗಿರುವುದು ಮತ್ತು ಹಾನಿಗೊಳಗಾಗಿರುವುದು ಕಂಡುಬಂದಿದೆ. ಪ್ರಾಥಮಿಕ ಪರಿಶೀಲನೆಯಲ್ಲಿ ಸಿಲಿಂಡರ್ ಸ್ಫೋಟದಿಂದ ಅವಘಡ ಉಂಟಾಗಿದೆ ಎಂದು ತಿಳಿದುಬಂದಿದೆ.
ಅಕ್ಕ, ತಮ್ಮ ಸಾವು: ಈ ಅವಘಡದಲ್ಲಿ ಸಂಜಯ್ ಕುಮಾರ್ ಮತ್ತು ಸೋನಿಯಾ ದಂಪತಿಗಳ ಒಂದೂವರೆ ವರ್ಷದ ಗಂಡು ಮಗು ಮತ್ತು ನಾಲ್ಕು ವರ್ಷದ ಹೆಣ್ಣು ಮಗು ಸಾವನ್ನಪ್ಪಿದೆ. ಮನೆಯೊಳಗೆ ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿಕೊಂಡಿರುವುದನ್ನು ಅರಿತ ನೆರೆಹೊರೆಯವರು ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಮಾಹಿತಿ ಸಿಕ್ಕ ತಕ್ಷಣವೇ ತಜಂಬೂರು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ಮಾಡಿದರು. ಜೊತೆಗೆ ಅಗ್ನಿಶಾಮಕ ದಳದ ಸಿಬ್ಬಂದಿಯು ಅವಶೇಷಗಳಡಿ ಸಿಲುಕಿಕೊಂಡಿದ್ದ ಮತ್ತು ತೀವ್ರ ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿರುವ ಒಬ್ಬ ಬಾಲಕ ಸೇರಿದಂತೆ ಏಳು ಜನರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು.
ಗಾಯಾಳುಗಳ ವಿವರ: ವೈರಮುತ್ತು (45), ಸೆಲ್ವಿ (40) ದಂಪತಿ ಮತ್ತು ಇವರ 7 ವರ್ಷದ ಮಗ ಪ್ರದೀಪ್ (7) ಹಾಗೂ ಸಂಜೀವ್ ಕುಮಾರ್ (27), ಸೋನಿಯಾ (25), ಮುರುಗನ್ (45) ಮತ್ತು ಚಿತ್ರಾ (55) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಜಂಬೂರು ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.






