ಯುವಜನ

ಇನ್‌ಸ್ಟಾಗ್ರಾಂನಲ್ಲಿ ಯುವತಿಗೆ ಪದೇಪದೆ ಮೆಸೇಜ್‌ ಮಾಡಿ ಕಿರುಕುಳ, ಯುವಕನ ಹತ್ಯೆ

Views: 128

ಕನ್ನಡ ಕರಾವಳಿ ಸುದ್ದಿ: ಇನ್‌ಸ್ಟಾಗ್ರಾಂನಲ್ಲಿ ಯುವತಿಗೆ ನಿರಂತರವಾಗಿ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು ಮಂಜುನಾಥ್ (21) ಎಂದು ಗುರುತಿಸಲಾಗಿದೆ.

ಮಂಜುನಾಥ್ ತರೀಕೆರೆ ತಾಲೂಕಿನ ಉಡೇವಾ ಗ್ರಾಮದ ನಿವಾಸಿಯಾಗಿದ್ದು, ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದ ಬಳಿ ಈ ಘಟನೆ ನಡೆದಿದೆ. ಪರಿಚಯವಿದ್ದ ಯುವತಿಗೆ ಮಂಜುನಾಥ್ ಪದೇಪದೆ ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ. ಯುವತಿಗೆ ಈಗಾಗಲೇ ವೇಣು ಎಂಬ ಯುವಕನೊಂದಿಗೆ ಮದುವೆ ನಿಶ್ಚಿತಾರ್ಥವಾಗಿದ್ದು, ‘ಎಂಗೇಜ್ಮೆಂಟ್ ಆಗಿದೆ, ಮೆಸೇಜ್ ಮಾಡಬೇಡ’ ಎಂದು ಯುವತಿ ಮಂಜುನಾಥ್‌ಗೆ ತಿಳಿಸಿದ್ದಳು. ಆದರೂ ಮಂಜುನಾಥ್ ಮೆಸೇಜ್ ಮಾಡುತ್ತಲೇ ಇದ್ದ. ಇದನ್ನು ಯುವತಿ ತನ್ನನ್ನು ಮದುವೆಯಾಗಲಿರುವ ಯುವಕ ವೇಣುಗೆ ತಿಳಿಸಿದ್ದಾಳೆ.

ಈ ಹಿನ್ನೆಲೆಯಲ್ಲಿ ಮಾತನಾಡಬೇಕು ಎಂದು ಮಂಜುನಾಥ್‌ನನ್ನು ಕರೆಸಿಕೊಂಡ ವೇಣು ಆತನ ಮೇಲೆ ಸ್ನೇಹಿತರಾದ ಕಿರಣ್, ಅಪ್ಪು ಮತ್ತು ಮಂಜು ಜೊತೆ ಜಗಳವಾಡಿದ್ದಾನೆ. ಗಲಾಟೆ ವೇಳೆ ಮಂಜುನಾಥ್‌ಗೆ ಚಾಕುವಿನಿಂದ ಇರಿದು ನಾಲ್ವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ಮಂಜುನಾಥನನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಈ ಘಟನೆ ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Articles

Back to top button
error: Content is protected !!