ಕುಂದಾಪುರ: ಲೋಕ ಕಲ್ಯಾಣಾರ್ಥವಾಗಿ ಹಂಗಳೂರಿನಲ್ಲಿ ಅಕ್ಷರ ಲಕ್ಷ ಗಾಯತ್ರೀ ಮಹಾಯಾಗ ಸಂಪನ್ನ
ವೇದಾಧ್ಯಯನದಿಂದ ವಿಮುಖರಾಗಿ ಬ್ರಾಹ್ಮಣರಿಂದು ಅವನತಿಯತ್ತ ಸಾಗಿದ್ದಾರೆ - ರಘುನಾಥ
Views: 39
ಕನ್ನಡ ಕರಾವಳಿ ಸುದ್ದಿ: ಸಮಾಜದಲ್ಲಿ ಚತುರ್ವರ್ಣ ಪದ್ಧತಿ ಇದ್ದಾಗ ಬ್ರಾಹ್ಮಣರೆಲ್ಲರೂ ವೇದಾಧ್ಯಯನ ನಡೆಸುತ್ತಾ ಉನ್ನತ ಸ್ಥಾನದಲ್ಲಿದ್ದರು. ಆದರೆ, ಸಂವಿಧಾನ ಆಡಳಿತ ಜಾರಿಗೆ ಬಂದಾಗ ಬ್ರಾಹ್ಮಣರು ಸಾಮಾನ್ಯ ವರ್ಗಕ್ಕೆ ಸೇರಿಸಲ್ಪಟ್ಟು, ಜೀವನೋಪಾಯಕ್ಕಾಗಿ ವೇದಾಧ್ಯಯನದಿಂದ ವಿಮುಖರಾಗಿ ಲೌಕಿಕ ವಿದ್ಯಾರ್ಜನೆಗೆ ತೊಡಗಿದರು. ಬ್ರಾಹ್ಮಣರ ಅಸ್ಮಿತೆಯು ಮಸುಕಾಗುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲರೂ ಅನುಷ್ಠಾನ ಮತ್ತು ಸಂಘಟನೆಯ ಕಡೆ ಗಮನ ಹರಿಸಬೇಕಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಘುನಾಥ ಎಸ್.ಕರೆ ನೀಡಿದರು.
ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಆಶ್ರಯದಲ್ಲಿ ಹಂಗಳೂರು ಶ್ರೀ ಚಿಕ್ಕ ಮಹಾಲಿಂಗೇಶ್ವರ ದೇವಾಲಯ ವಠಾರದಲ್ಲಿ ನಡೆದ ಅಕ್ಷರ ಲಕ್ಷ ಗಾಯತ್ರೀ ಯಾಗ, ತ್ರಯಂಬಿಕಾ ಯಾಗ, ಲಲಿತಾ ಸಹಸ್ರನಾಮ ಮತ್ತು ಕುಂಕುಮಾರ್ಚನೆ ಕಾರ್ಯಕ್ರಮದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾಗೆ ಕಳೆದ ಎಂಟು ತಿಂಗಳಲ್ಲಿ 12 ಸಾವಿರ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದೆ. 50 ವರ್ಷಗಳಿಂದಲೂ ಆಗದ ಈ ಕಾರ್ಯವನ್ನು ಹೊಸ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡ ಎಂಟೇ ತಿಂಗಳಲ್ಲಿ ಮಾಡಲಾಗಿದೆ. ಬ್ರಾಹ್ಮಣರ ಅಭಿವೃದ್ಧಿಗಾಗಿ ನೂರು ಕೋಟಿಯ ನಿಧಿ ಸ್ಥಾಪನೆಗೆ ಚಾಲನೆ ನೀಡಿದ್ದು, ಈಗಾಗಲೇ 70 ಲಕ್ಷ ರೂ. ಸಂಗ್ರಹಿಸಲಾಗಿದೆ. ಸದಸ್ಯತ್ವ ಶುಲ್ಕ ಇನ್ನಿತರ ಮೊತ್ತವನ್ನು ಸೇರಿಸಿ 1.40ಕೋಟಿ ಠೇವಣಿ ಇಡಲಾಗಿದೆ. ಕೇಂದ್ರ ಕಚೇರಿ ಗಾಯತ್ರೀ ಭವನವನ್ನು ನವೀಕರಿಸಲಾಗಿದೆ. ಬ್ರಾಹ್ಮಣರ ಜನಿವಾರಕ್ಕೆ ಕುತ್ತು ಬಂದಾಗ, ಜಾತಿ ಗಣತಿಯಲ್ಲಿ ಸಮಸ್ಯೆ ಉಂಟಾದಾಗೆಲ್ಲ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆ ಹೂಡಿದ್ದು, ನ್ಯಾಯಾಲಯ ಬ್ರಾಹ್ಮಣರ ಹಿತಾಸಕ್ತಿ ಕಾಪಾಡುವ ಆದೇಶ ಹೊರಡಿಸಿದೆ ಎಂದು ಅವರು ಮಹಾಸಭಾದ ಕಾರ್ಯಗಳನ್ನು ವಿವರಿಸಿದರು.
ಧಾರ್ಮಿಕ ಸಂದೇಶ ನೀಡಿದ ಶೃಂಗೇರಿ ಶ್ರೀ ಶಾರದಾ ಪೀಠದ ಪಂಚಾಂಗಕರ್ತ ಜ್ಯೋತಿಷ ವಿದ್ವಾನ್ ವಾಸುದೇವ ಜೋಯಿಸರು, ಬ್ರಾಹ್ಮಣ ಎಂಬುದು ಜಾತಿವಾಚಕ ಶಬ್ದವಲ್ಲ, ಅದು ಕರ್ಮ ವಾಚಕ ಶಬ್ದ. ಶಾಸ್ತ್ರ ವಿಧಿಸಿದ ಎಲ್ಲಾ ಕರ್ಮಗಳನ್ನು ಆಚರಿಸುತ್ತಿದ್ದರೆ ಮಾತ್ರ ಆತ ನೀತಿ ಬ್ರಾಹ್ಮಣನೆನಿಸಿಕೊಳ್ಳುತ್ತಾನೆ. ಇಲ್ಲವಾದರೆ ಕೇವಲ ಜಾತಿ ಬ್ರಾಹ್ಮಣನಾಗಿರುತ್ತಾನೆ. ಬ್ರಾಹ್ಮಣ್ಯ ಉಳಿಸಲು ಸರ್ಕಾರ ಏನೂ ಮಾಡದು. ಅದನ್ನು ನಾವೇ ನಮ್ಮ ಅನುಷ್ಠಾನದಿಂದ ಉಳಿಸಿಕೊಳ್ಳಬೇಕು. ಬ್ರಾಹ್ಮಣ್ಯ ಉಳಿದರೆ ಮಾತ್ರ ಜಗತ್ತು🥰 ಉಳಿಯುತ್ತದೆ, ನಾವೂ ಉಳಿಯುತ್ತೇವೆ. ಇಂದು ನಿತ್ಯ ಕಾರ್ಯಗಳಿಗೆ ಯಂತ್ರೋಪಕರಣಗಳ ನೆರವು ಇದ್ದು, ಅನುಷ್ಠಾನಕ್ಕೆ ತುಂಬಾ ಸಮಯ ಸಿಗುತ್ತಿದೆ. ಆದರೆ ನಾವು ಅದರಿಂದ ವಿಮುಖರಾಗುತ್ತಿರು ವುದು ಬೇಸರದ ಸಂಗತಿ. ಬ್ರಾಹ್ಮಣರಿಂದು ಪರಸ್ಪರ ದೋಷಾರೋಪಣೆಯಲ್ಲೇ ಇದ್ದಾರೆ. ಆದ್ದರಿಂದ ನಾವೆಲ್ಲರೂ ಶಾಸ್ತ್ರ ವಿಧಿಸಿದ ಬದುಕುವ ರೀತಿಯನ್ನರಿತು ನೀತಿ ಬ್ರಾಹ್ಮಣರಾಗಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿ ಉದ್ಯಮಿ ನೇರಂಬಳ್ಳಿ ರಾಘವೇಂದ್ರ ರಾವ್ ಮಾತನಾಡಿ, ಇಂದು ಬ್ರಾಹ್ಮಣ ಕುಟುಂಬ ಸಣ್ಣದಾಗಿ, ಪೌರೋಹಿತ್ಯ ಕಲಿಯುವವರೇ ಇಲ್ಲವಾಗಿದ್ದಾರೆ. ಭವಿಷ್ಯದಲ್ಲಿ ಬ್ರಾಹ್ಮಣರು, ಬ್ರಾಹ್ಮಣ್ಯ ಉಳಿಯಬೇಕಾದರೆ ಬ್ರಾಹ್ಮಣರ ಜನಸಂಖ್ಯೆ ಜಾಸ್ತಿಯಾಗಬೇಕು. ಒಂದು ಕುಟುಂಬ ಕನಿಷ್ಠ ನಾಲ್ಕು ಮಕ್ಕಳನ್ನಾದರೂ ಹೊಂದಬೇಕು. ಇಲ್ಲವಾದರೆ, ಮುಂದಿನ ವರ್ಷಗಳಲ್ಲಿ ಬ್ರಾಹ್ಮಣರ ಸಭೆಗೂ ಐವತ್ತು ಮಂದಿ ಸೇರುವುದು ಕಷ್ಟವಾಗಲಿದೆ ಎಂದು ಎಚ್ಚರಿಸಿದರು.
ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಕೃಷ್ಣಾನಂದ ಚಾತ್ರ ಸ್ವಾಗತಿಸಿದರು. ವಿದ್ವಾನ್ ಮಾಧವ ಅಡಿಗರು ರೂಪಿಸಿದ ವಿವಾಹ ವೇದಿಕೆಯನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ರಾಜಶೇಖರ್, ಕೋಟೇಶ್ವರ ವಲಯಾಧ್ಯಕ್ಷ ವಾದಿರಾಜ ಹೆಬ್ಬಾರ್, ತಾಲೂಕು ಗೌರವಾಧ್ಯಕ್ಷ ಶುಭಚಂದ್ರ ಹತ್ವಾರ್, ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಭಾರ್ಗವಿ ಭಟ್ ಶುಭ ಹಾರೈಸಿದರು.
ಯುವ ವಿಪ್ರ ವೇದಿಕೆ ಅಧ್ಯಕ್ಷ ಕೇಶವ ಅಡಿಗ ಮಕ್ಕಿಮನೆ ಸಭಾಧ್ಯಕ್ಷತೆ ವಹಿಸಿದ್ದು, ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ವಿಪ್ರವಾಣಿ ಪ್ರಾಯೋಜಕ ಮಹಾಬಲ ಬಾಯರಿ, ಧಾರ್ಮಿಕ ಕಾರ್ಯಕ್ರಮ ಆಯೋಜಕ ವೇದಮೂರ್ತಿ ಗುರು ಸೋಮಯಾಜಿ ಹಾಗೂ ಎಲ್ಲ ವಲಯಗಳ 80 ಮೀರಿದ ಹಿರಿಯ ಪುರೋಹಿತರನ್ನು ಗೌರವಿಸಲಾಯಿತು. ಶ್ರೀ ವೆಂಕಟಲಕ್ಷ್ಮೀ ಬಿಲ್ಡರ್ಸ್ ನ ಚಂದ್ರಶೇಖರ ಐತಾಳ, ಪರಿಷತ್ ಕೋಶಾಧಿಕಾರಿ ಶ್ರೀಕಾಂತ ಕನ್ನಂತ, ಉಪಾಧ್ಯಕ್ಷ ಗಣೇಶ್ ಮಯ್ಯ, ಉಪಾಧ್ಯಕ್ಷೆ ಪವಿತ್ರ ಅಡಿಗ, ಜೊತೆ ಕಾರ್ಯದರ್ಶಿ ಗಣೇಶ್ ರಾವ್, ಸದಸ್ಯೆ ಶಾಂತಾ ಗಣೇಶ್ ರಾವ್, ಕೋಟೇಶ್ವರ ವಲಯ ಮಹಿಳಾ ವೇದಿಕೆ ಅಧ್ಯಕ್ಷೆ ವಾಣಿಶ್ರೀ ಹೆಬ್ಬಾರ್, ಎಲ್ಲಾ ವಲಯಾಧ್ಯರು, ಪೂರ್ವಾಧ್ಯಕ್ಷರು ಉಪಸ್ಥಿತರಿದ್ದರು.
ವೇದಮೂರ್ತಿ ಗುರು ಸೋಮಯಾಜಿ ನೇತೃತ್ವದ ಪುರೋಹಿತ ವೃಂದದವರು ಅಕ್ಷರ ಲಕ್ಷ ಗಾಯತ್ರೀ ಯಾಗ, ತ್ರಯಂಬಿಕಾ ಯಾಗ ನೆರವೇರಿಸಿ, ವೇದ ವಿಧ್ವಾಂಸರು, ಸುಮಂಗಲಿಯರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಪೂರ್ಣಾಹುತಿ ಸಮರ್ಪಿಸಿದರು. ವೇದಮೂರ್ತಿ ಆನಗಳ್ಳಿ ಚೆನ್ನಕೇಶವ ಭಟ್ ಸುಮಂಗಲಿಯರಿಂದ ಲಲಿತಾ ಸಹಸ್ರನಾಮ ಪೂರ್ವಕ ಕುಂಕುಮಾರ್ಚನೆ ನೆರವೇರಿಸಿದರು.
ಡಾ. ವೆಂಕಟರಾಮ ಭಟ್ ಕಾರ್ಯಕ್ರಮ ನಿರೂಪಿಸಿ, ಪರಿಷತ್ ಕಾರ್ಯದರ್ಶಿ ವಾದಿರಾಜ ಹೆಬ್ಬಾರ್ ವಂದಿಸಿದರು.










