ಧಾರ್ಮಿಕ

ಕೊಲ್ಲೂರು ಮೂಕಾಂಬಿಕಾ ದೇವಾಲಯ ಆವರಣದಲ್ಲಿ ಅನ್ಯ ಅರ್ಚಕರಿಂದ ಹೋಮಹವನ:ಹೈ ಕೋರ್ಟ್ ನಲ್ಲಿ ದಾವೆ

Views: 141

ಕನ್ನಡ ಕರಾವಳಿ ಸುದ್ದಿ: ಕೊಲ್ಲೂರು ಮೂಕಾಂಬಿಕಾ ದೇಗುಲದ ಆವರಣದಲ್ಲಿ ವಂಶಪಾರಂಪರಿಕ ಅರ್ಚಕರನ್ನು ಹೊರತುಪಡಿಸಿ ಅನ್ಯ ಅರ್ಚಕರಿಗೂ ಹೋಮ ಹವನ ನಡೆಸಲು ಅವಕಾಶ ಮಾಡಿಕೊಟ್ಟಿರುವ ದೇಗುಲದ ಆಡಳಿತ ಮಂಡಳಿಯ ಕ್ರಮವನ್ನು ಪ್ರಶ್ನಿಸಿ ವಂಶಪಾರಂಪರಿಕ ಅರ್ಚಕರು ಹೈ ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ.

ದೇಗುಲದ ವ್ಯವಸ್ಥಾಪನ ಸಮಿತಿಯು ಕಳೆದ ಸೆಪ್ಟೆಂಬರ್‌ನಲ್ಲಿ ನಿರ್ಣಯವೊಂದನ್ನು ತೆಗೆದುಕೊಂಡು ಕಾರ್ಯನಿರ್ವಾಹಕ ಅಧಿಕಾರಿ ಅವರ ವಿವೇಚನೆಯಂತೆ ಕ್ಷೇತ್ರದಲ್ಲಿ ಅರ್ಚಕರು, ಉಪಾಧಿವಂತ ಕ್ಷೇತ್ರ ಪುರೋಹಿತರಿಗೆ ಚಂಡಿಕಾ ಹೋಮ ನಡೆಸಲು ಅವಕಾಶ ಕಲ್ಪಿಸಿತ್ತು. ಇದನ್ನು ಪ್ರಶ್ನಿಸಿ ಆನುವಂಶಿಕ ಅರ್ಚಕರಾದ ಕೆ. ವಿಶ್ವೇಶ್ವರ ಅಡಿಗ, ಕೆ. ಎನ್. ಸುಬ್ರಹ್ಮಣ್ಯ ಅಡಿಗ ಹಾಗೂ ಕೆ. ನಿತ್ಯಾನಂದ ಅಡಿಗ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ.

ಬುಧವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾ| ಸೂರಜ್ ಗೋವಿಂದ ರಾಜ್ ಅವರ ಏಕಸದಸ್ಯ ನ್ಯಾಯ ಪೀಠವು ಪ್ರಕರಣದ ಪ್ರತಿವಾದಿಗಳಾದ ವ್ಯವಸ್ಥಾಪನಾ ಮಂಡಳಿ, ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಮುಜರಾಯಿ ಇಲಾಖೆಗೆ ನೋಟಿಸ್‌ ಜಾರಿಗೊಳಿಸಿತು. ಹಾಗೆಯೇ ದೇಗುಲದಲ್ಲಿ ಹೋಮ ಹವನ ಮಾಡಿದ ಅರ್ಚಕರನ್ನು ಪ್ರತಿವಾದಿಗಳನ್ನಾಗಿಸುವಂತೆ ಅರ್ಜಿದಾರರಿಗೆ ಸೂಚಿಸಿತು.

ನ್ಯಾಯಾಲಯ ಒಂದು ಹಂತದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರ ಆದೇಶಕ್ಕೆ ತಡೆ ನೀಡಲು ಮುಂದಾಗಿತ್ತು. ಆದರೆ ಇತರ ಅರ್ಚಕರನ್ನು ಅರ್ಜಿದಾರರು ಪ್ರತಿವಾದಿಗಳನ್ನಾಗಿ ಮಾಡದಿರುವುದನ್ನು ಗಮನಿಸಿ, ತಡೆಯಾಜ್ಞೆ ನೀಡಲು ನಿರಾಕರಿಸಿ ವಿಚಾರಣೆಯನ್ನು ಮುಂದೂಡಿತು.

ಏನಿದು ದೂರು?

2001ರ ಫೆಬ್ರವರಿಯಲ್ಲಿ ವ್ಯವಸ್ಥಾಪನಾ ಸಮಿತಿಯು ಆನುವಂಶಿಕ ಅರ್ಚಕರ ಅಹವಾಲು ಕೇಳದೆಯೇ ಹೋಮಗಳನ್ನು ನಡೆಸುವ ಬಗ್ಗೆ ನಿರ್ಣಯವೊಂದನ್ನು ಅಂಗೀಕರಿಸಿತು. ಆದರೆ ಇದನ್ನು ಪ್ರಶ್ನಿಸಿ ಅರ್ಚಕರು ಹೈ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದಾಗ 2001ರ ಡಿಸೆಂಬರ್‌ನಲ್ಲಿ ಅರ್ಚಕರ ವಾದವನ್ನು ಆಲಿಸಿ ಹೊಸ ಆದೇಶ ಹೊರಡಿಸುವಂತೆ ಸಮಿತಿಗೆ ಸೂಚಿಸಿತು. 2002ರ ಸೆಪ್ಟೆಂಬರ್‌ನಲ್ಲಿ ಚಂಡಿಕಾ ಹೋಮದಂತಹ ಪ್ರಮುಖ ಹೋಮಗಳನ್ನು ದೇವಸ್ಥಾನದ ತಂತ್ರಿಗಳು ಮತ್ತು ಇತರ ಅರ್ಚಕರು ಮಾತ್ರ ನೆರವೇರಿಸಬೇಕು ಎಂದು ಸಮಿತಿಯು ನಿರ್ಣಯಿಸಿತು. ಅಲ್ಲದೆ, ದೇವಸ್ಥಾನದ ಆವರಣದಲ್ಲಿ ಹೋಮ ನಡೆಸಲು ಮೂರನೇ ವ್ಯಕ್ತಿಗಳು ಭಕ್ತರನ್ನು ಸಂಪರ್ಕಿಸಬಾರದು ಎಂದು ತೀರ್ಮಾನಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅನಧಿಕೃತ ವ್ಯಕ್ತಿಗಳು ಅರ್ಚಕರನ್ನು ಸಂಪರ್ಕಿಸದೆಯೇ ಹೋಮ ಮತ್ತು ಇತರ ಆಚರಣೆಗಳನ್ನು ನಡೆಸಲು ಭಕ್ತರನ್ನು ಸಂಪರ್ಕಿಸುತ್ತಿದ್ದಾರೆ ಎಂದು ಆನುವಂಶಿಕ ಅರ್ಚಕರು 2023ರಲ್ಲಿ ಎರಡು ಬಾರಿ ಜಿಲ್ಲಾಧಿಕಾರಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಅದನ್ನು ಪರಿಗಣಿಸಲಾಗಿಲ್ಲ. ಕಳೆದ ಸೆಪ್ಟಂಬರ್‌ನಲ್ಲಿ ವ್ಯವಸ್ಥಾಪನಾ ಸಮಿತಿಯು ಕಾರ್ಯನಿರ್ವಾಹಕ ಅಧಿಕಾರಿಗೆ ತಮ್ಮ ಇಚ್ಛೆಯಂತೆ ಇತರ ವ್ಯಕ್ತಿಗಳಿಗೆ ಹೋಮ ನಡೆಸಲು ಅನುಮತಿ ನೀಡುವ ಅಧಿಕಾರವನ್ನು ನೀಡಿದೆ.

ಅದರಂತೆ ನವೆಂಬರ್‌ನಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಚಂಡಿಕಾ ಹೋಮವನ್ನು ಅರ್ಜಿದಾರ ರೊಂದಿಗೆ ಇತರ ವ್ಯಕ್ತಿಗಳೂ (ಆನುವಂಶಿಕ ರಲ್ಲದವರು) ನಡೆಸುವಂತೆ ಆದೇಶ ಹೊರಡಿಸಿದ್ದಾರೆ. ಈ ಆದೇಶ “ಕರ್ನಾ ಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾ ದಾಯ ದತ್ತಿಗಳ ಕಾಯ್ದೆಯ ಉಲ್ಲಂಘನೆ. ಕಾಯ್ದೆಯ ಪ್ರಕಾರ ಅಧಿಕಾರಿಗಳು ದೇವಸ್ಥಾನದ ಒಪ್ಪಿತ ಸಂಪ್ರದಾಯಗಳು ಮತ್ತು ಆಚರಣೆಗಳಲ್ಲಿ ಹಸ್ತಕ್ಷೇಪ ಮಾಡಬಾರದು. ವ್ಯವಸ್ಥಾಪನಾ ಸಮಿತಿಯು ಕಾನೂನಿನ ಮಾನ್ಯತೆಯಿಲ್ಲದೆ ಕಾರ್ಯನಿರ್ವಾಹಕ ಅಧಿಕಾರಿಗೆ ಅಧಿಕಾರವನ್ನು ಹಸ್ತಾಂತರಿಸಿದೆ. ‘ಕ್ಷೇತ್ರ ಪುರೋಹಿತರು’ ಸೇವಾ ನೋಂದಣಿಯಲ್ಲಿ ಅರ್ಚಕರೆಂದು ಗುರುತಿಸಲ್ಪಟ್ಟಿಲ್ಲ, ಆದರೂ ಅವರಿಗೆ ಪೂಜೆ ಮಾಡಲು ಅವಕಾಶ ನೀಡಲಾಗುತ್ತಿದೆ. ಆದ್ದರಿಂದ ವ್ಯವಸ್ಥಾಪನಾ ಸಮಿತಿಯ ಸೆಪ್ಟೆಂಬರ್‌ನ ನಿರ್ಣಯ ಮತ್ತು ನವೆಂಬರ್‌ನಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಹೊರಡಿಸಿರುವ ಆದೇಶಕ್ಕೆ ಮಧ್ಯಾಂತರ ತಡೆಯಾಜ್ಞೆ ನೀಡುವಂತೆ ಕೋರಿದ್ದಾರೆ.

Related Articles

Back to top button