ರಸಗುಲ್ಲಾ ಖಾಲಿಯಾಗಿದ್ದಕ್ಕೆ ವಧು – ವರನ ಕಡೆಯವರ ಹೊಡೆದಾಟ.. ನಿಂತು ಹೋದ ಮದುವೆ!
Views: 202
ಕನ್ನಡ ಕರಾವಳಿ ಸುದ್ದಿ: ಮದುವೆ ಮನೆಯ ಊಟದಲ್ಲಿ ರಸಗುಲ್ಲಾ ಖಾಲಿಯಾಗಿದ್ದಕ್ಕೆ ವಧು ವರನ ಕುಟುಂಬಗಳು ಬಡಿದಾಡಿಕೊಂಡಿದ್ದು, ಅಂತಿಮ ಹಂತದಲ್ಲಿದ್ದ ಮದುವೆಯೇ ರದ್ದುಗೊಂಡಿದೆ.
ರಸಗುಲ್ಲಾ ಖಾಲಿಯಾಗಿದ್ದಕ್ಕೆ ಕೋಪಗೊಂಡ ಜನ ಜಗಳ ಪ್ರಾರಂಭಿಸಿದ್ದರು. ಇದು ವಿಕೋಪಕ್ಕೆ ತಿರುಗಿ ಅಲ್ಲೇ ಇದ್ದ ಕುರ್ಚಿಗಳಿಂದ ಹೊಡೆದಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಕುರ್ಚಿ ಸಾಲದೇ ತಟ್ಟೆ, ಗ್ಲಾಸ್ಗಳನ್ನು ತಮ್ಮ ಬಡಿದಾಟಕ್ಕೆ ಬಳಿಸಿಕೊಂಡಿದ್ದಾರೆ. ರಸಗುಲ್ಲಕ್ಕಾಗಿ ಶುರುವಾದ ಈ ಜಗಳ ವಧು ಮತ್ತು ವರನ ಕಡೆಯವರ ನಡುವೆಯೇ ಭೀಕರವಾದ ಜಗಳಕ್ಕೆ ತಿರುಗುವಂತೆ ಮಾಡಿದೆ. ಅಂತಿಮವಾಗಿ ಈ ಹೊಡೆದಾಟ ಮದುವೆ ಮುರಿದು ಬೀಳಲು ಕಾರಣವಾಗಿದೆ.
ನವೆಂಬರ್ 29ರಂದು ಈ ಘಟನೆ ನಡೆದಿದ್ದು ಸಿಸಿಟಿವಿ ದೃಶ್ಯಾವಳಿಗಳು ಎಲ್ಲೆಡೆ ವೈರಲಾಗುತ್ತಿವೆ. ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದು, ಹಲವಾರು ಜನರು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ.
ವರನ ವಿರುದ್ಧ ವರದಕ್ಷಿಣೆ ಆರೋಪ, FIR ದಾಖಲಿಸಿದ ವಧುವಿನ ತಂದೆ: ವಧುವಿನ ತಂದೆ ಸುರೇಶ್ ಪ್ರಸಾದ್, “ತಮ್ಮ ಮಗಳ ಮದುವೆ ಬೋಧ್ ಗಯಾದ ಹಥಿಯಾವಾನ್ ನಿವಾಸಿ ಪವನ್ ಕುಮಾರ್ ಜೊತೆ ನಿಶ್ಚಯಿಸಲಾಗಿತ್ತು. ನಾವು ನವೆಂಬರ್ 29 ರಂದು ಬಕ್ರೌರ್‌ನಲ್ಲಿರುವ ಹೋಟೆಲ್‌ಗೆ ಬಂದೆವು. ಅಲ್ಲೇ ಮದುವೆ ನಡೆಯಬೇಕಿತ್ತು. ವರನ ಕಡೆಯವರೂ ಕೂಡ ಬಕ್ರೌರ್‌ನಲ್ಲಿರುವ ಹೋಟೆಲ್‌ಗೆ ಆಗಮಿಸಿದರು. ಮದುವೆಯ ವಿಧಿವಿಧಾನಗಳು ನಡೆಯುತ್ತಿದ್ದವು. ಏತನ್ಮಧ್ಯೆ, ವರನ ಕಡೆಯವರು ಎರಡು ಲಕ್ಷ ರೂಪಾಯಿಗಳ ಹೆಚ್ಚುವರಿ ವರದಕ್ಷಿಣೆ ಕೇಳಲು ಪ್ರಾರಂಭಿಸಿದರು. ಅದನ್ನು ನಾವು ವಿರೋಧಿಸಿದೆವು. ಇದಕ್ಕೆ ವರನ ಕಡೆಯವರು ಜಗಳವಾಡಲು ಪ್ರಾರಂಭಿಸಿದರು. ಘಟನೆಯಲ್ಲಿ ನಮ್ಮ ಕಡೆಯ ಹಲವಾರು ಸದಸ್ಯರು ಗಾಯಗೊಂಡಿದ್ದಾರೆ. ಈ ಬಗ್ಗೆ ನಾವು ಬೋಧ್ ಗಯಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ” ಎಂದು ತಿಳಿಸಿದ್ದಾರೆ.
ರಸಗುಲ್ಲಾಕ್ಕಾಗಿ ವಧುವಿನ ಕಡೆಯವರಿಂದ ಜಗಳ – ಪ್ರತ್ಯಾರೋಪ: ಊಟದಲ್ಲಿ ರಸಗುಲ್ಲಾದ ಖಾಲಿಯಾಗಿದೆ ಎಂದು ವರನ ಕಡೆಯವರು ಹೇಳಿದ್ದರಿಂದ ವಧುವಿನ ಕಡೆಯವರು ಕೋಪಗೊಂಡು ಕುರ್ಚಿಗಳನ್ನು ಮುರಿದು ಹಾಕಿದರು ಎಂದು ವರನ ಕಡೆಯವರು ಆರೋಪಿಸಿದ್ದಾರೆ. ಮದುವೆ ರದ್ದಾಗಿರುವುದು ಕೇವಲ ರಸಗುಲ್ಲಾಗಳ ಕೊರತೆಯಿಂದಾಗಿ ಮಾತ್ರ. ವರದಕ್ಷಿಣೆ ಬೇಡಿಕೆಯ ಆರೋಪಗಳು ಸುಳ್ಳು. ಬಹುತೇಕ ಎಲ್ಲಾ ಮದುವೆಯ ಆಚರಣೆಗಳು ಪೂರ್ಣಗೊಂಡಿದ್ದವು. ವರನ ಕಡೆಯವರು ಇನ್ನೂ ಮದುವೆಯನ್ನು ಮುಂದುವರಿಸಲು ಸಿದ್ಧರಿದ್ದಾರೆ. ಆದರೆ, ವಧುವಿನ ಕಡೆಯವರು ಇದಕ್ಕೆ ಒಪ್ಪುತ್ತಿಲ್ಲ ಎಂದು ವರನ ಕಡೆಯವರು ಹೇಳಿದ್ದಾರೆ.






