ಸಾಮಾಜಿಕ

ಮದುವೆಯಾದ ಎರಡೇ ದಿನಕ್ಕೆ ವಧು ಅನುಮಾನಾಸ್ಪದ ಸಾವು, ಅತ್ತೆ ಮಾವ ಶವ ಬಿಟ್ಟು ಪರಾರಿ ಆರೋಪ

Views: 27

ಕನ್ನಡ ಕರಾವಳಿ ಸುದ್ದಿ: ಉತ್ತರ ಪ್ರದೇಶದ ಗೋರಖ್‌ಪುರದ ಪಿ ಪಿ ಗಂಜ್ ಪ್ರದೇಶದಲ್ಲಿ 21 ವರ್ಷದ ಯುವತಿ ಮದುವೆಯಾದ ಕೇವಲ ಎರಡು ದಿನಗಳ ನಂತರ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಈಗ ಶೋಕ ಮಡುಗಟ್ಟಿದೆ. ಯುವತಿಯ ಕುಟುಂಬ, ಅತ್ತೆ ಮಾವಂದಿರರೇ ತಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಮೃತ ಯುವತಿ ಸೀಮಾ ಫೆಬ್ರವರಿ 20 ರಂದು ಪಿ ಪಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬಧ್ನಿ ಗ್ರಾಮದ ನಿವಾಸಿ ಮನೋಜ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಪಿಪ್ರೈಚ್ ಪ್ರದೇಶದ ರತನ್‌ಪುರ ಗ್ರಾಮದ ಕಮಲ್ ಪ್ರಭಾ ದೇವಿ ಅವರ ಪುತ್ರಿ ಸೀಮಾ ಫೆಬ್ರವರಿ 21 ರಂದು ತನ್ನ ಅತ್ತೆ ಮಾವನ ಮನೆಗೆ ಹೋಗಿದ್ದರು ಮತ್ತು ಫೆಬ್ರವರಿ 22 ರಂದು ಸಂಜೆ, ಆಕೆಯ ಆರೋಗ್ಯ ಹದಗೆಟ್ಟಿದೆ ಎಂದು ಆಕೆಯ ಕುಟುಂಬಕ್ಕೆ ತಿಳಿಸಲಾಗಿದೆ.

ಆಕೆಯನ್ನು ಬಿಆರ್‌ಡಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೀಮಾ ನಿಧನರಾದರು.

ಸೀಮಾ ಅವರ ಪೋಷಕರು ಆಸ್ಪತ್ರೆಗೆ ತಲುಪುವ ಹೊತ್ತಿಗೆ, ಆಕೆಯ ಅತ್ತೆ ಮಾವಂದಿರು ಶವವನ್ನು ಬಿಟ್ಟು ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ.

ಸೀಮಾ ಅವರ ತಾಯಿ ಮಂಗಳವಾರ ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆಯಾದಾಗಿನಿಂದ ಪತಿ ಮತ್ತು ಅವರ ಕುಟುಂಬದವರು ಸೀಮಾಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಮತ್ತು ಈಗ ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಕುಟುಂಬದವರ ದೂರಿನ ಆಧಾರದ ಮೇಲೆ ಕಾನೂನು ಕ್ರಮ ಕೈಗೊಂಡಿದ್ದಾರೆ.

Related Articles

Back to top button
error: Content is protected !!