ರಾಜಕೀಯ

ಶೀಘ್ರದಲ್ಲಿಯೇ ಸಚಿವ ಸಂಪುಟ ಸರ್ಜರಿ ಸಿಎಂ ಸುಳಿವು!

Views: 71

ಕನ್ನಡ ಕರಾವಳಿ ಸುದ್ದಿ: ಮುಂದಿನ ಎರಡೂವರೆ ವರ್ಷ ನಾನೇ ಮುಖ್ಯಮಂತ್ರಿ ಎಂದು ಮೈಸೂರು ದಸರಾ ಸಂದರ್ಭದಲ್ಲಿ ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ಸಂಪುಟ ಪುನರ್ ರಚನೆಯ ಸುಳಿವು ನೀಡುವ ಮೂಲಕ ತಮ್ಮ ನಾಯಕತ್ವ ಅಭಾದಿತ ಎಂಬುದನ್ನು ಸಂದೇಶವನ್ನು ರವಾನಿಸಿದ್ದಾರೆ.

ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಬೆಂಗಳೂರಿನ ಶಾಸಕರ ಭವನದ ಆವರಣದಲ್ಲಿರುವ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಸಂಪುಟ ಪುನರ್ ರಚಿಸುವ ಸ್ಪಷ್ಟ ಸೂಚನೆಯನ್ನು ನೀಡಿದರು.

ಪರಿಶಿಷ್ಟ ಸಮುದಾಯದ ವಾಲ್ಮೀಕಿ ಶಾಸಕರೊಬ್ಬರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂಬ ಬೇಡಿಕೆ ಇರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಮುಂದೆ ಸಂಪುಟ ಪುನರ್ ರಚನೆಯಾಗುತ್ತದೆ. ಆ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.

ರಾಜ್ಯದಲ್ಲಿ ನವೆಂಬರ್‌ನಲ್ಲಿ ಕ್ರಾಂತಿಯಾಗುತ್ತದೆ, ಅಧಿಕಾರ ಹಂಚಿಕೆ ಒಪ್ಪಂದ ಜಾರಿಯಾಗುತ್ತದೆ ಎಂಬ ಚರ್ಚೆಗಳು ನಡೆದಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಮಾತನಾಡಿರುವುದು ಮಹತ್ವ ಪಡೆದುಕೊಂಡಿದೆ.

ಈ ಹಿಂದೆ ಹಲವು ಬಾರಿ ಮುಂದಿನ ೫ ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿದ್ದ ಸಿದ್ದರಾಮಯ್ಯನವರು, ಮೊನ್ನೆ ದಸರಾ ಸಂದರ್ಭದಲ್ಲೂ ಮುಂದಿನ ಎರಡೂವರೆ ವರ್ಷ ನಾನೇ ಮುಖ್ಯಮಂತ್ರಿ. ಬರುವ ವರ್ಷವೂ ನಾಡದೇವತೆ ಚಾಮುಂಡೇಶ್ವರಿಗೆ ನಾನೇ ಪುಷ್ಪಾರ್ಚನೆ ಮಾಡುತ್ತೇನೆ ಎಂದು ಹೇಳಿದ್ದರು.

ಮುಖ್ಯಮಂತ್ರಿಗಳ ಈ ಹೇಳಿಕೆ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿ ಕಾಂಗ್ರೆಸ್‌ನಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಮುಖ್ಯಮಂತ್ರಿ ಪರ ಇರುವ ಸಚಿವರು, ಶಾಸಕರು ಸಿದ್ದರಾಮಯ್ಯನವರೇ ೫ ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂಬ ಹೇಳಿಕೆ ನೀಡಿದ್ದರು. ಹಾಗೆಯೇ ಡಿ.ಕೆ. ಶಿವಕುಮಾರ್ ಮುಂದೆ ಮುಖ್ಯಮಂತ್ರಿಯಾಗಬೇಕು ಎಂದು ಡಿ.ಕೆ. ಶಿವಕುಮಾರ್ ಪರ ಶಾಸಕರು ಮಾತನಾಡಿದ್ದರು.

ಈ ಎಲ್ಲದಕ್ಕೂ ತೆರೆ ಎಳೆಯುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದು ಹೇಳಿದ್ದರು. ಹಾಗೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡುವುದು ಪಕ್ಷ ವಿರೋಧಿ ಕೆಲಸ. ಯಾರೂ ಈ ಬಗ್ಗೆ ಮಾತನಾಡಬಾರದು, ಮಾತನಾಡಿರುವ ಶಾಸಕರಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಹೇಳಿ, ತಮ್ಮ ಪರ ಮಾತನಾಡಿದ್ದ ಕುಣಿಗಲ್ ಶಾಸಕ ಡಾ. ರಂಗನಾಥ್ ರವರಿಗೂ ನೋಟಿಸ್ ಜಾರಿ ಮಾಡಿದ್ದರು.

ಈ ಎಲ್ಲ ಬೆಳವಣಿಗೆ ನಡುವೆಯೇ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವ ಸಂಪುಟ ಪುನರ್ ರಚನೆಯ ಸುಳಿವು ನೀಡುವ ಮೂಲಕ ತಮ್ಮ ನಾಯಕತ್ವಕ್ಕೆ ಯಾವುದೇ ತೊಂದರೆಯಿಲ್ಲ. ಮುಂದೆ ಸಂಪುಟ ಪುನರ್ ರಚಿಸುತ್ತೇನೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.

Related Articles

Back to top button